

ಹುಬ್ಬಳ್ಳಿ : ಸಿಟಿಜನ್ ಫಾರ್ ಡೆಮಾಕ್ರಸಿ(ಸಿಎಫ್ಡಿ) ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ದೆಹಲಿಯ ಗಾಂಧಿಶಾಂತಿ ಪ್ರತಿಷ್ಠಾನದಲ್ಲಿ ಏಪ್ರಿಲ್ 19 ಹಾಗೂ 20ರಂದು ನಡೆಯಲಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ, ಏಳು ವಿವಿಧ ಗೋಷ್ಠಿಗಳು ನಡೆಯಲಿವೆ. ಜೆಎನ್ಯು ಪ್ರೊ. ಆನಂದ ಕುಮಾರ, ಪ್ರೊ. ಜಗದೀಪ ಚೊಕ್ಕರ್, ಅರ್ಥಶಾಸ್ತ್ರಜ್ಞ ಪ್ರೊ. ಅರುಣಕುಮಾರ ಸೇರಿದಂತೆ ಸಿಎಫ್ಡಿ ಪದಾಧಿಕಾರಿಗಳು ಮಾತನಾಡಲಿದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಂಘ-&ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಿ.ಸಿ. ತಮ್ಮಣ್ಣ ಹಾಗೂ ಅವರ ಸಂಬಂಧಿಕರು ಒತ್ತುವರಿ ಮಾಡಿಕೊಂಡ ಜಮೀನು 14 ಎಕರೆಯಲ್ಲ, 71 ಎಕರೆ. ಈ ಗೋಮಾಳ ಭೂಮಿಯನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಒತ್ತುವರಿದಾರರಿಗೆ ಸಹಾಯ ಮಾಡಿರುವ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಒತ್ತುವರಿದಾರರಿಂದ ವಶಪಡಿಸಿಕೊಂಡ ಗೋಮಾಳ ಭೂಮಿಯನ್ನು ಪುನಃ ಗೋಮಾಳವಾಗಿ ಪರಿವತಿರ್ಸಬೇಕು. ಈ ಕುರಿತು ಸರ್ಕಾರ ನ್ಯಾಯಾಲಯಕ್ಕೆ ಅನುಸರಣಾ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಲಕ್ಷ್ಮಣ ಬಕ್ಕಾಯಿ ಮತ್ತು ಎಸ್ಪಿಎಸ್ ಮುಲ್ಲಾ ಸುದ್ದಿಗೋಷ್ಠಿಯಲ್ಲಿ ಇದ್ದರು.