

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 12 ಸಾವಿರ ವಿವಿಧ ಕೋರ್ಸ್ಗಳಲ್ಲಿ ಸೀಟು ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಸೀಟು ಪಡೆದುಕೊಂಡ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಡಿ.8 ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 12,118 ಅಭ್ಯರ್ಥಿಗಳು ಮೊದಲ ಸುತ್ತಿನಲ್ಲಿ ಸಿಕ್ಕ ಸೀಟುಗಳಿಗೆ ತೃಪ್ತಿ ಪಟ್ಟುಕೊಂಡಿದ್ದು, ಚಾಯ್ಸ್&1 ಆಯ್ಕೆ ಮಾಡುವ ಮೂಲಕ ಸೀಟು ಖಚಿತ ಪಡಿಸಿದ್ದಾರೆ.
ಮೊದಲನೇ ಸುತ್ತಿನ ಸೀಟು ಇಟ್ಟುಕೊಂಡು ಚಾಯ್ಸ್&2 ಆಯ್ಕೆ ಮಾಡುವ ಮೂಲಕ ಎರಡನೇ ಸುತ್ತಿನಲ್ಲಿ ಉತ್ತಮ ಕಾಲೇಜಿಗಾಗಿ 28,000 ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಚಾಯ್ಸ್&2 ಆಯ್ಕೆ ಮಾಡಿದ್ದಾರೆ. 9 ಸಾವಿರ ವಿದ್ಯಾರ್ಥಿಗಳು ಚಾಯ್ಸ್&3 ಆಯ್ಕೆ ಮಾಡುವ ಮೂಲಕ ಮೊದಲ ಸುತ್ತಿನಲ್ಲಿ ಸಿಕ್ಕ ಸೀಟನ್ನು ತೊರೆದು ಎರಡನೇ ಸುತ್ತಿನಲ್ಲಿ ಉತ್ತಮ ಸೀಟಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಜೆಇಇ ಅಥವಾ ಕಾಮೆಡ್&ಕೆನಲ್ಲಿ ಸೀಟು ಪಡೆದಿರುವ ಅಭ್ಯರ್ಥಿಗಳು ಮೊದಲ ಸುತ್ತಿನಲ್ಲಿ ಸಿಕ್ಕ ಸೀಟನ್ನು ತೊರೆದಿದ್ದು ಮಾತ್ರವಲ್ಲದೆ, ನನಗೆ ಮುಂದಿನ ಯಾವುದೇ ಸುತ್ತಿನಲ್ಲೂ ಸೀಟು ಬೇಡವೆಂದು ತಿಳಿಸಲು ಒಂದು ಸಾವಿರ ವಿದ್ಯಾರ್ಥಿಗಳು ಚಾಯ್ಸ್&4 ಅಯ್ಕೆ ಮಾಡಿದ್ದಾರೆ. ಈ ವರ್ಷ ಮೊದಲನೇ ಸುತ್ತಿನಲ್ಲಿ ಇಂಜಿನಿಯರಿಂಗ್ಗೆ 1,120 ಸೀಟುಗಳು ಹೆಚ್ಚುವರಿಯಾಗಿ ಸಿಕ್ಕಿದ್ದವು. ಕಳೆದ ವರ್ಷ 55,640 ಸೀಟುಗಳು ಲಭ್ಯವಿದ್ದವು. ಈ ವರ್ಷ 56,760 ಸೀಟುಗಳು ವಿದ್ಯಾರ್ಥಿಗಳ ಆಯ್ಕೆಗೆ ಸಿಕ್ಕಿದ್ದವು.
2ನೇ ಸುತ್ತಿನಲ್ಲಿ ಉತ್ತಮ ಸೀಟು: ಈಗಾಗಲೇ 1 ಸಾವಿರ ವಿದ್ಯಾರ್ಥಿಗಳು ಸಿಕ್ಕ ಸೀಟನ್ನು ತೊರೆದಿರುವುದರಿಂದ ಈ ಎಲ್ಲ ಸೀಟುಗಳು ಎರಡನೇ ಸುತ್ತಿನ ಸೀಟು ಹಂಚಿಕೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ದೊರೆಯಲಿವೆ. ಅಲ್ಲದೆ, ಬಹುತೇಕ ಕಾಲೇಜುಗಳು ಮ್ಯಾನೇಜ್ಮೆಂಟ್ ಕೋಟಾದಲ್ಲಿರುವ ಸೀಟುಗಳನ್ನು ಸಹ ಕೆಇಎಗೆ ಸಲ್ಲಿಕೆ ಮಾಡುವುದರಿಂದ ಸೀಟುಗಳ ಸಂಖ್ಯೆಯೂ ಸಹ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಇಎ ಮೂಲಗಳು ತಿಳಿಸಿವೆ. 2020ನೇ ಸಾಲಿನ ಸಿಇಟಿಗೆ ಒಟ್ಟಾರೆ 1.94 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಜೆಇಇ, ಕಾಮೆಡ್-ಕೆ ಸೇರಿದಂತೆ ಹಲವಾರು ಪರೀಕ್ಷೆಗಳ ಮೂಲಕ ವಿವಿಧ ಕಡೆ ಪ್ರವೇಶ ಪಡೆದುಕೊಳ್ಳಲಿದ್ದು, ಈ ವರ್ಷ 94,815 ವಿದ್ಯಾರ್ಥಿಗಳು ದಾಖಲೆಗಳನ್ನು ಅಪ್ಲೋಡ್ ಮಾಡಿದ್ದರು.