

ಬೆಳಗಾವಿ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಸಿಇಟಿ, ನೀಟ್ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಇಲ್ಲದೆ ಪರದಾಡುತ್ತಿರುವ ಗ್ರಾಮೀಣ, ಆರ್ಥಿಕ ದುರ್ಬಲರಾಗಿರುವ ವಿದ್ಯಾರ್ಥಿಗಳಿಗಾಗಿ ‘ಸಿಇಟಿ-ಸಕ್ಷಮ್’ ಎಂಬ ವಿನೂತನ ಕಾರ್ಯಕ್ರಮ ಬೆಳಗಾವಿಯಲ್ಲಿ ಆರಂಭಗೊಂಡಿದೆ.
ವರ್ಷದಿಂದ ವರ್ಷಕ್ಕೆ ಕಬ್ಬಿಣದ ಕಡಲೆಯಾಗುತ್ತಿರುವ ಸಿಇಟಿ, ನೀಟ್ ಪರೀಕ್ಷೆಗಳನ್ನು ಎದುರಿಸಲು ಪೂರ್ವಸಿದ್ಧತೆ, ತರಬೇತಿ ಇಲ್ಲದೆ ವೈದ್ಯ, ಇಂಜಿನಿಯರಿಂಗ್ ಪ್ರವೇಶ ಎದುರಿಸಲು ಸಾಧ್ಯವಾಗದೆ ಗ್ರಾಮೀಣ ಪ್ರದೇಶ, ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳು ಕಲಿಕೆಯಿಂದ ದೂರವಾಗುತ್ತಿದ್ದಾರೆ. ಈ ಹಿನ್ನೆಲೆ ವಿದ್ಯಾರ್ಥಿಗಳನ್ನು ಸಿಇಟಿ, ನೀಟ್ ಪರೀಕ್ಷೆಗಳಿಗೆ ಸಜ್ಜುಗೊಳಿಸಲು, ಅನುಭವಿ ಶಿಕ್ಷಕರಿಂದ ತರಬೇತಿ ಕೊಡಿಸಲು ಜಿಪಂ ಸಿಇಒ ರಾಹುಲ ಶಿಂಧೆ ಅವರು ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಿಇಟಿ ಸಕ್ಷಮ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ.
ಈಗಾಗಲೇ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ 34 ಸರ್ಕಾರಿ ವಿಜ್ಞಾನ ಪಿಯು ಕಾಲೇಜುಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ, ನೀಟ್ ಪರೀಕ್ಷೆಗಳನ್ನು ನಡೆಸುವ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಜರುಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಿಯುಸಿ ವಿದ್ಯಾರ್ಥಿಗಳು ಕಾಲೇಜುಗಳಲ್ಲೇ ಪರೀಕ್ಷೆ ಎದುರಿಸಲಿದ್ದಾರೆ. ಪ್ರತಿ ತಿಂಗಳ ಎರಡನೇ ಶನಿವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ನಾಲ್ಕನೇ ಶನಿವಾರ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಸಿದ್ಧತಾ ಪರೀಕ್ಷೆಗಳು ಆರಂಭಗೊಂಡಿವೆ. ಮೌಲ್ಯಮಾಪನ ಆಧರಿಸಿ, ಕಾಲೇಜು ಮಟ್ಟದಲ್ಲಿ ಉಪನ್ಯಾಸಕರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಸಿಇಟಿ, ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಕ್ರಮವಹಿಸುವುದು. ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪರಿಣತಿ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು ಸಹಕಾರಿಯಾಗಲಿವೆ ಎನ್ನುತ್ತಾರೆ ಪದವಿ ಪೂರ್ವಶಿಕ್ಷಣ ಇಲಾಖೆ ಅಧಿಕಾರಿಗಳು.
ಸರ್ಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆ ನಡೆಸುವ ಮೂಲಕ ಸಿಇಟಿ-ನೀಟ್ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುವುದು ಸಿಇಟಿ-ಸಕ್ಷಮ್ ಕಾರ್ಯಕ್ರಮವಾಗಿದೆ. ಆ. 24ರಿಂದ ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊದಲನೇ ಅಭ್ಯಾಸ ಪರೀಕ್ಷೆ ಆರಂಭವಾಗಿದೆ.
ಸರ್ಕಾರಿ ವಿಜ್ಞಾನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿರುವ ಸಿಇಟಿ, ನೀಟ್ ಪರೀಕ್ಷೆ ಭಯ ಹೋಗಲಾಡಿಸುವುದು. ಆತ್ಮವಿಶ್ವಾಸ ಹೆಚ್ಚಿಸಿ ಪರೀಕ್ಷೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಿಇಟಿ-ಸಕ್ಷಮ್ ಎಂಬ ವಿನೂತನ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.| ರಾಹುಲ್ ಶಿಂಧೆ, ಜಿಪಂ ಸಿಇಒ