

ಮೈಸೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರಸ್ತಕ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಗುರುವಾರ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಿತು.
ಬೆಳಗ್ಗೆ 10.30ರಿಂದ 11.50ರ ವರೆಗೆ ನಡೆದ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ನಡೆದ ಗಣಿತ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದರು. 2ನೇ ದಿನವಾದ ಏ.19ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ನಡೆಯಲಿದೆ.
ಜೀವಶಾಸ್ತ್ರ ಪರೀಕ್ಷೆಗೆ ನೋಂದಾಯಿತ 17,137 ಅಭ್ಯರ್ಥಿಗಳ ಪೈಕಿ 13042 ವಿದ್ಯಾರ್ಥಿಗಳು ಹಾಜರಾದರು. 4,095 ಜನ ಗೈರಾದರು. ಅಂತೆಯೇ ಗಣಿತ ಪರೀಕ್ಷೆಯನ್ನು 13,042 ವಿದ್ಯಾರ್ಥಿಗಳು ಬರೆದಿದ್ದು, 4095 ವಿದ್ಯಾರ್ಥಿಗಳು ಗೈರಾದರು. ಯಾವುದೇ ಪರೀಕ್ಷಾ ಕೇಂದ್ರದಲ್ಲೂ ಸಮಸ್ಯೆಯಾಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ ತಿಳಿಸಿದರು.
ಮೈಸೂರು ನಗರ ವ್ಯಾಪ್ತಿಯ 29 ಸೇರಿದಂತೆ ಜಿಲ್ಲೆಯ 39 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯನ್ನು ನೋಂದಾಯಿತ ಅಭ್ಯರ್ಥಿಗಳು ಎದುರಿಸಿದರು. ಇದರಲ್ಲಿ ಹಾಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿದ್ದರು. ಹಳೇ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಟಿ.ವಿ. ಕ್ಯಾಮರಾ ಮೂಲಕ ಕಣ್ಗಾವಲು ಇಡಲಾಗಿತ್ತು. ಪೊಲೀಸ್ ಸಿಬ್ಬಂದಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟರು.
ಕೈ ಗಡಿಯಾರ, ಮೊಬೈಲ್ ಫೋನ್, ಟ್ಯಾಬ್ಲೆಟ್, ಕ್ಯಾಲ್ಕುೃಲೇಟರ್, ಬ್ಲೂಟೂಥ್ ನಿರ್ಬಂಧಿಸಲಾಗಿತ್ತು. ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನು, ಪ್ರವೇಶಪತ್ರದ ಜತೆಗೆ ಭಾವಚಿತ್ರ ಇರುವ ಒಂದು ಗುರುತುಪತ್ರ (ಆಧಾರ್, ಪಾನ್ ಇತ್ಯಾದಿ) ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಯಿತು.