ವಿದ್ಯುತ್ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟ ಸೆಸ್ಕ್

Electricity
Published on

ಮೈಸೂರು: ವಿದ್ಯುತ್ ಖರೀದಿ ದರ ಹೆಚ್ಚಳ, ಕಂದಾಯ ಕೊರತೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ವಿದ್ಯುತ್ ದರವನ್ನು 2025-26ನೇ ಸಾಲಿಗೆ ಪ್ರತಿ ಯೂನಿಟ್‌ಗೆ 0.68 ಪೈಸೆ, 2026-27ನೇ ಸಾಲಿಗೆ 1.03 ಪೈಸೆ ಹಾಗೂ 2027-28ನೇ ಸಾಲಿಗೆ 1.23 ಪೈಸೆ ಏರಿಕೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದಿರಿಸಿದ್ದು, ಸೆಸ್ಕ್ ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಬಹುವಾರ್ಷಿಕ ವಿದ್ಯುತ್ ದರ ಪರಿಷ್ಕರಣೆ ಪ್ರಯುಕ್ತ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆಯೋಜಿಸಿದ್ದ ಸಾರ್ವಜನಿಕರ ಅಭಿಪ್ರಾಯ ಅಲಿಕೆ ಸಭೆಯಲ್ಲಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ದರ ಹೆಚ್ಚಳದ ಪ್ರಸ್ತಾವನೆ ಮಾಡಿದರು.

ಕಂದಾಯದ ಕೊರತೆ: 2025-26ನೇ ಆರ್ಥಿಕ ವರ್ಷದಲ್ಲಿ 8160.57 ಕೋಟಿ ರೂ. ನಿವ್ವಳ ಕಂದಾಯದ ಅಗತ್ಯತೆ ಇದ್ದು, ವಿದ್ಯುತ್ ದರಗಳಿಂದ 7551.01 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದ್ದು, ಹಾಲಿ ವಿದ್ಯುತ್ ದರದಿಂದ ಒಟ್ಟು 609.56 ಕೋಟಿ ರೂ. ಕಂದಾಯ ಕೊರತೆ ಕಂಡು ಬರಲಿದೆ. ಕೊರತೆ ನೀಗಿಸಲು 8982.28 ಮಿಲಿಯನ್ ಯೂನಿಟ್ ವಿದ್ಯುತ್ ಮಾರಾಟಕ್ಕೆ ಪ್ರತಿ ಯೂನಿಟ್‌ಗೆ 0.68 ಪೈಸೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಅದೇ ರೀತಿ 2026-27ನೇ ಸಾಲಿಗೆ 8890.12 ಕೋಟಿ ರೂ ಕಂದಾಯದ ಅಗತ್ಯತೆ ಇದ್ದು, ವಿದ್ಯುತ್ ದರಗಳಿಂದ 7919.82 ಕೋಟಿ ರೂ., ಕಂದಾಯ ನಿರೀಕ್ಷಿಸಲಾಗಿದೆ. ಹಾಲಿ ವಿದ್ಯುತ್ ದರದಿಂದ ಒಟ್ಟು 970.30 ಕೋಟಿ ರೂ. ಕಂದಾಯ ಕೊರತೆ ಆಗಲಿದ್ದು, ಹಾಗಾಗಿ 9398.14 ಮಿಲಿಯನ್ ವಿದ್ಯುತ್ ಮಾರಾಟಕ್ಕೆ ಪ್ರತಿ ಯೂನಿಟ್‌ಗೆ 1.03 ಪೈಸೆ ಏರಿಕೆ ಮಾಡಬೇಕು ಎಂದು ಕೋರಿದರು.

2027-28ನೇ ಸಾಲಿಗೆ 9524.13 ಕೋಟಿ ರೂ. ಕಂದಾಯದ ಅಗತ್ಯತೆ ಇದ್ದು, ವಿದ್ಯುತ್ ದರಗಳಿಂದ 8309.99 ಕೋಟಿ ರೂ. ಸಂ

ಗ್ರಹವಾಗುವ ನಿರೀಕ್ಷೆ ಇದ್ದು, ಹಾಲಿ ವಿದ್ಯುತ್ ದರದಿಂದ ಒಟ್ಟು 1214.15 ಕೋಟಿ ರೂ. ಕಂದಾಯ ಕೊರತೆ ಕಂಡು ಬರಲಿದ್ದು, ಈ ಕೊರತೆ ಸರಿದೂಗಿಸಲು 9836.16 ಮಿಲಿಯನ್ ಯೂನಿಟ್ ವಿದ್ಯುತ್ ಮಾರಾಟಕ್ಕೆ ಪ್ರತಿ ಯೂನಿಟ್‌ಗೆ 1.23 ಪೈಸೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅನುಮೋದನೆಯ ಪ್ರಕಾರ 2024ನೇ ಸಾಲಿಗೆ ವಿದ್ಯುತ್ ಖರೀದಿ ದರ 4275.52 ಕೋಟಿ ರೂ.ಗಳಾಗಿತ್ತು. ಅದರೆ, ವಾಸ್ತವವಾಗಿ ಖರೀದಿಗೆ 5850.90 ಕೋಟಿ ರೂ.ವೆಚ್ಚವಾಗಿದ್ದು, ಒಟ್ಟು 1575.38 ಕೋಟಿ ರೂ. ವ್ಯತ್ಯಾಸ (ಶೆ.37) ಕಂಡು ಬಂದಿದೆ. ಅಲ್ಲದೆ, ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ ಎಂದರು. ಸಭೆಯಲ್ಲಿ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್, ಸದಸ್ಯರಾದ ಎಚ್.ಕೆ. ಜಗದೀಶ್, ಜಾವೇದ್ ಅಖ್ತರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net