

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) 2024-25ನೇ ಸಾಲಿಗೆ ಪ್ರತಿ ಯೂನಿಟ್ ವಿದ್ಯುತ್‌ಗೆ 50 ಪೈಸೆ ದರ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮುಂದಿರಿಸಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ 2024-25ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಅವರು ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು. ದರ ಹೆಚ್ಚಳಕ್ಕೆ ಕೈಗಾರಿಕೆಗಳ ಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಆಯೋಗದ ಅಧ್ಯಕ್ಷ ಪಿ.ರವಿಕುಮಾರ್, ಸದಸ್ಯ ಎಂ.ಡಿ. ರವಿ ಪ್ರತಿಯೊಬ್ಬರ ಮನವಿಯನ್ನು ಆಲಿಸಿದರು. ಇದೇ ರೀತಿಯ ಸಭೆಯನ್ನು ಆಯೋಗವು ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲಿ ನಡೆಸಿ ದರ ಹೆಚ್ಚಳ ಕುರಿತು ಅಂತಿಮ ತೀರ್ಮಾನವನ್ನು ಪ್ರಕಟಿಸಲಿದೆ.
ದರ ಹೆಚ್ಚಳವೇಕೆ?: ಆರ್ಥಿಕ ವರ್ಷ 2024-25ನೇ ಸಾಲಿನಲ್ಲಿ ಸೆಸ್ಕ್ ಒಟ್ಟು 439.55 ಕೋಟಿ ರೂ. ಕಂದಾಯ ಕೊರತೆಯನ್ನು ಎದುರಿಸಲಿದೆ. ಈ ಕೊರತೆ ಸರಿದೂಗಿಸಲು ಎಲ್ಲ ಜಕಾತಿಗಳನ್ನೊಳಗೊಂಡಂತೆ ಸರಾಸರಿ ಪ್ರತಿ ಯೂನಿಟ್‌ಗೆ 50 ಪೈಸೆ ಏರಿಕೆ ಮಾಡಬೇಕು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಮನವಿ ಮಾಡಿದರು.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ 7379.89 ಕೋಟಿ ರೂ. ಕಂದಾಯ ಅಗತ್ಯವಿದ್ದು, ಪ್ರಸ್ತುತ ವಿದ್ಯುತ್ ದರಗಳಿಂದ ಒಟ್ಟು 6940.34 ಕೋಟಿ ರೂ. ಕಂದಾಯ ಸಂಗ್ರಹವಾಗುತ್ತಿದ್ದು, ಒಟ್ಟು 439.55 ಕೋಟಿ ರೂ. ಕಂದಾಯ ಕೊರತೆ ಉಂಟಾಗಲಿದೆ. ಈ ಕೊರತೆ ಸರಿದೂಗಿಸಲು ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಆಯೋಗದ ಗಮನ ಸೆಳೆದರು.
ದರ ಏರಿಕೆ ಮಾಡಬೇಡಿ: ಸೆಸ್ಕ್‌ನ ಮನವಿಯನ್ನು ತಿರಸ್ಕರಿಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಯೋಗದ ಮುಂದೆ ಮನವಿ ಮಾಡಿದರು. ಪ್ರತಿ ಬಾರಿ ದರ ಏರಿಕೆಯಿಂದ ಕೈಗಾರಿಕೆ, ಕೃಷಿ ಸೇರಿದಂತೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಿಗೂ ಹೊರೆ ಆಗುತ್ತಿದೆ. ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವೇತನ ಹೆಚ್ಚಿನ ಪ್ರಮಾಣದಲ್ಲಿ ಇದೆ. ಅಲ್ಲದೆ, ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿದ್ಯುತ್‌ಅನ್ನು ಬೇಕಾಬಿಟ್ಟಿ ಖರೀದಿ ಮಾಡುತ್ತಿದ್ದು, ವಿದ್ಯುತ್ ಸೋರಿಕೆಯ ಕಡೆಗೆ ಗಮನ ಹರಿಸುತ್ತಿಲ್ಲ. ಸೆಸ್ಕ್ ತಾನು ಮಾಡುತ್ತಿರುವ ತಪ್ಪಿನಿಂದ ನಷ್ಟ ಅನುಭವಿಸುತ್ತಿದ್ದು, ಈ ನಷ್ಟದ ಹೊರೆಯನ್ನು ಜನರ ಮೇಲಿ ಹೊರಿಸುವುದು ಸರಿಯಲ್ಲ ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಆಯೋಗದ ಗಮನ ಸೆಳೆದರು.