

ಬೆಂಗಳೂರು: ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ನಡುವೆ ಬಾಂಧವ್ಯ ಬೆಸೆಯುವ ಹಾಗೂ ಉದ್ಯೋಗವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಎನ್‌ಐಎಸ್‌ಎಂ ಮತ್ತು ಐಸಿಎಸ್‌ಐ ಸಹಯೋಗದಲ್ಲಿ ಉದ್ಯಮಶೀಲ ಕೌಶಲಾಧಾರಿತ ಪ್ರಮಾಣಪತ್ರ (ಸರ್ಟಿಫಿಕೇಷನ್) ಕೋರ್ಸ್‌ಗಳನ್ನು ಆರಂಭಿಸಿದೆ.
ಆಧುನಿಕ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ರೂಪುಗೊಂಡಿರುವ ಕೌಶಲಾಧಾರಿತ, ನೈಜ ಅನುಭವ ನೀಡುವ, ವೃತ್ತಿಪರ ಸ್ವರೂಪದ ಪ್ರಮಾಣಪತ್ರ ಕೋರ್ಸ್‌ಗಳಾಗಿವೆ.
ಈ ಕೋರ್ಸ್‌ಗಳು ಬಿ.ಕಾಂ. ಬಿಬಿಎ ಮತ್ತು ಇತರೆ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಡಿ ಬರುವ ಪದವಿ ಕಾರ್ಯಕ್ರಮಗಳ ಪಠ್ಯಕ್ರಮದ ಭಾಗವಾಗಿ 3ನೇ, 4ನೇ ಮತ್ತು 5ನೇ ಸೆಮಿಸ್ಟರ್‌ಗಳಲ್ಲಿ ತಲಾ 1 ಕ್ರೆಡಿಟ್ ಹೊಂದಿರುವಂತೆ ಜಾರಿಗೆ ತರಲಾಗುತ್ತಿವೆ.
ಯಾವೆಲ್ಲ ಕೋರ್ಸ್‌ಗಳು?
ಹಣಕಾಸು ಲೆಕ್ಕಪತ್ರ ನಿರ್ವಹಣೆ ಮತ್ತು ತೆರಿಗೆ, ಡಿಜಿಟಲ್ ಮಾರ್ಕೆಟಿಂಗ್, ವ್ಯಾಪಾರ ವಿಶ್ಲೇಷಣೆ ಮತ್ತು ದತ್ತಾಂಶ ದೃಶ್ಯೀಕರಣ, ಉದ್ಯಮಶೀಲತಾ ಕೌಶಲಗಳು ಮತ್ತು ಆರಂಭಿಕ ನಿರ್ವಹಣೆ, ಟ್ಯಾಲಿ ಮತ್ತು ಲೆಕ್ಕಪತ್ರ ನಿರ್ವಹಣೆ ಸಾಫ್ಟ್‌ವೇರ್, ಮಾನವ ಸಂಪನ್ಮೂಲ ನಿರ್ವಹಣಾ ಅಭ್ಯಾಸಗಳು, ವ್ಯಾಪಾರ ಸಂವಹನ ಮತ್ತು ಮಾತುಕತೆ ಕೌಶಲಗಳು, ಹಣಕಾಸು ಮಾರುಕಟ್ಟೆಗಳು ಮತ್ತು ಹೂಡಿಕೆ ಬ್ಯಾಂಕಿಂಗ್, ಭಾರತಕ್ಕೆ ಹಣಕಾಸು ಸಾಕ್ಷರತೆ ಎಂಬ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.
ಕಾರ್ಯಕ್ರಮದಲ್ಲಿ ಕುಲಸಚಿವ ಶೇಕ್ ಲತ್ೀ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಪ್ರೊ. ಡಾ. ಕೆ. ನಿರ್ಮಲಾ ಉಪಸ್ಥಿತರಿದ್ದರು.
ರಾಷ್ಟ್ರೀಯ ವೃತ್ತಿಪರ ಸಂಸ್ಥೆಗಳೊಂದಿಗೆ ಕೈಜೋಡಿಸುವ ಮೂಲಕ, ವಿದ್ಯಾರ್ಥಿಗಳಿಗೆ ನೈಜ ಜ್ಞಾನ, ಕೈಗಾರಿಕಾ ಪರಿಚಯ ಹಾಗೂ ಭವಿಷ್ಯದ ಸ್ಪರ್ಧಾತ್ಮಕ ತಯಾರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಸಾಮರ್ಥ್ಯವನ್ನು ತುಂಬುವಲ್ಲಿ ವಿಶ್ವವಿದ್ಯಾಲಯವು ಈ ಮೂಲಕ ಪ್ರಮುಖ ಪಾತ್ರ ವಹಿಸುತ್ತಿದೆ. - ಡಾ. ಎಸ್.ಎಂ. ಜಯಕರ್, ಬೆಂ.ವಿವಿ ಕುಲಪತಿ