

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಶ್ರೀ ಕೃಷ್ಣ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರರಾಯರ ವೃಂದಾವನದಲ್ಲಿ ಶಿಲಾ ಗರ್ಭಗೃಹ ನಿರ್ವಿುಸಿದ್ದು, ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಶುಕ್ರವಾರ ಶಾಸ್ತ್ರೋಕ್ತವಾಗಿ ಬ್ರಹ್ಮ ಕಲಶೋತ್ಸವ ಜರುಗಿತು.
ಗುರುವಾರ ಚಕ್ರಾಬ್ದಿ ಮಂಡಲದಲ್ಲಿ 108 ಕಲಶಗಳನ್ನು ಸ್ಥಾಪನೆ ಮಾಡಿ ಪೂಜಿಸಲಾಯಿತು. ವಿಷ್ಣುಗಾಯತ್ರಿ ಮಂತ್ರದಿಂದ ಹೋಮ ನಡೆಸಿ ಅದರ ಚೈತನ್ಯ ಪ್ರಸಾದ ಫಲವನ್ನು 108 ಕಲಶದಲ್ಲಿ ಸ್ಥಾಪಿಸಿ ಶ್ರೀ ವಿದ್ಯಾಧೀಶ ತೀರ್ಥರು ಶ್ರೀಕೃಷ್ಣ ಮತ್ತು ರಾಘವೇಂದ್ರರಾಯರಿಗೆ ವಿಶೇಷ ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ನೆರೆದಿದ್ದ ಭಕ್ತರು ಕೃತಾರ್ಥ ಭಾವ ಅನುಭವಿಸಿದರು.
ನಂತರ ಶ್ರೀ ವಿದ್ಯಾಧೀಶ ತೀರ್ಥರು ಅನುಗ್ರಹ ಸಂದೇಶ ನೀಡಿ, ಭಕ್ತರು ಶ್ರೀಕೃಷ್ಣ ದೇವರು ಮತ್ತು ರಾಯರನ್ನು ಅಂತರ್ಗತದಲ್ಲಿ ಪ್ರತಿಷ್ಠಾಪಿಸಿಕೊಂಡು ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಎಲ್ಲ ನ್ಯೂನತೆಗಳಿಗೆ ದೇವರಲ್ಲಿಯೇ ಪಪರಿಹಾರವಿದೆ. ಜಗತ್ತು ಅಧ್ಯಾತ್ಮ ಸಾಧನೆಗಾಗಿ ಭಾರತದತ್ತ ದೃಷ್ಟಿ ನೆಟ್ಟಿದೆ. ಭಾರತೀಯರಾದ ನಾವು ನಮ್ಮಲ್ಲಿನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿದೆ ಎಂದು ನುಡಿದರು.
ಭೂವರಾಹ ಹೋಮ, ಅಷ್ಟಬಂಧ, ಸುದರ್ಶನ ಹೋಮ, ಭಜನಾ ಕಾರ್ಯಕ್ರಮಗಳು ಜರುಗಿದವು. ಗಾಯಕ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ನಡೆಸಿಕೊಟ್ಟರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅದ್ಯಕ್ಷ ಅನಂತ ಪದ್ಮನಾಭ ಐತಾಳ, ಉಪಾಧ್ಯಕ್ಷ ಅನಂತರಾಜ ಭಟ್, ಕಾರ್ಯದರ್ಶಿ ವಾದಿರಾಜ ಭಟ್ ಎಡನೀರು, ಸುರೇಶ ಕೆಮ್ತೂರು, ರಾಮಚಂದ್ರ ಉಪಾಧ್ಯಾಯ, ಕೃಷ್ಣರಾಜ ಕೆಮ್ತೂರು, ಶ್ರೀಧರ ಅಲೆಯೂರು. ದಯಾನಂದರಾವ್ ಶ್ರೀನಿವಾಸರಾವ್, ಶ್ರೀನಿವಾಸ ಓಕಡೆ, ಡಾ. ಸೂರ್ಯಕಾಂತ ಕಲ್ಲೂರಾಯ, ಸಂದೇಶ ಆಚಾರ್ಯ, ಶ್ಯಾಮ ಭಟ್ ಪೆರ್ವಾಜೆ, ಸುಬ್ರಮಣ್ಯಭಟ್ ಎಡನೀರು, ಅನಂತ ಕೃಷ್ಣ ಐತಾಳ, ಜಯಶ್ರೀ ಉಪಾಧ್ಯಾಯ, ಗೀತಾ ಸೋಮೇಶ್ವರ, ಶಶಿಮಂಗಳ ಐತಾಳ, ಆಯುಷ್ ಭಟ್, ಶ್ರವಣ ರಾವ್, ಇತರರು ಇದ್ದರು.