ಸಿರಿಧಾನ್ಯ ಅತ್ಯಂತ ಶ್ರೀಮಂತರ ಆಹಾರವಾಗುತ್ತಿವೆ: ಎನ್.ಹೇಮಂತ್

Cereal procession in shivamogga
ಜಿಲ್ಲಾಧಿಕಾರಿ ಕಚೇರಿಯಿಂದ ಎನ್‌ಟಿ ರಸ್ತೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿವರೆಗೆ ಸಿರಿಧಾನ್ಯ ಜಾಥಾ ನಡೆಯಿತು.
Published on

ಶಿವಮೊಗ್ಗ: ಒಂದು ಕಾಲದಲ್ಲಿ ಸಿರಿಧಾನ್ಯಗಳನ್ನು ಬಡವರ ಆಹಾರ ಎಂದು ಕರೆಯಲಾಗುತ್ತಿತ್ತು. ಈಗ ಅವು ಅತ್ಯಂತ ಶ್ರೀಮಂತರ ಆಹಾರವಾಗುತ್ತಿವೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಎನ್.ಹೇಮಂತ್ ಹೇಳಿದರು.

ಶಿವಮೊಗ್ಗ ಡಿಸಿ ಕಚೇರಿ ಎದುರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ಸಮಾಜ ಆಯೋಜಿಸಿದ್ದ ಸಿರಿಧಾನ್ಯ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯದ ದೃಷ್ಟಿಯಿಂದ ವಿವಿಧ ರೂಪದಲ್ಲಿ ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಲಾಗುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ಆಧುನಿಕ ಆಹಾರ ಪದ್ಧತಿಯಿಂದ ಚಿಕ್ಕ ವಯಸ್ಸಿನವರಿಂದ ಹಿಡಿದು ವಯೋಮಾನದವರೆಗೂ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ಕ್ಯಾನ್ಸರ್, ಬಂಜೆತನ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿವೆ. ಅವುಗಳನ್ನು ಹತೋಟಿಯಲ್ಲಿಡಲು ಸಿರಿಧಾನ್ಯ ವರದಾನವಾಗಿದೆ ಎಂದರು.

ಸಿರಿಧಾನ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಪೋಷಕಾಂಶ, ನಾರಿನಾಂಶ, ಬಿ ವಿಟಮಿನ್, ಪ್ರೋಟೀನ್, ಅಮೈನೋ ಆಸಿಡ್, ವಿಟಮಿನ್ ಸಿ ಕಬ್ಬಿಣಾಂಶ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪೊಟ್ಯಾಷಿಯಂ ಇತರೆ ಮನುಷ್ಯರ ಆರೋಗ್ಯಕ್ಕೆ ಬೇಕಾಗುವ ಎಲ್ಲ ರೀತಿಯ ಪೋಷಕಾಂಶಗಳು ಹೇರಳವಾಗಿವೆ. ಸಿರಿಧಾನ್ಯಗಳನ್ನು ಪೋಷಕಾಂಶಗಳ ಖಜಾನೆ ಎಂದು ಕರೆಯಲಾಗುತ್ತದೆ ಎಂದರು.

ಸಿರಿಧಾನ್ಯಗಳನ್ನು ಅತ್ಯಂತ ಕಡಿಮೆ ಮಳೆ ಬೀಳುವ, ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಹಾಗೂ ಫಲವತ್ತತೆ ಕಡಿಮೆ ಇರುವ ಭೂಮಿಯಲ್ಲಿ ಬೆಳೆಯಬಹುದು. ಕೃಷಿ ಇಲಾಖೆ ಸಿರಿಧಾನ್ಯ ಬೆಳೆಯುವ ರೈತರಿಗೆ ರೈತಸಿರಿ ಯೋಜನೆಯಡಿ 10,000 ರೂ.ವರೆಗೆ ಪ್ರೋತ್ಸಾಹಧನ ನೀಡುತ್ತಿದೆ ಎಂದರು.

ಜಂಟಿ ನಿರ್ದೇಶಕರ ಕಚೇರಿವರೆಗೆ ಜಾಥಾ

ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶಗಳೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಜನವರಿ 23ರಿಂದ 25ರವರೆಗೆ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಜಾಥಾವು ಎನ್‌ಟಿ ರಸ್ತೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿವರೆಗೆ ನಡೆಯಿತು. ಜಾಥಾದಲ್ಲಿ ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್, ಕೃಷಿ ಇಲಾಖೆ ಹಾಗೂ ಇತರೆ ಇಲಾಖೆ ಎಲ್ಲ ಸಿಬ್ಬಂದಿ, ಇತರೆ ಇಲಾಖೆಗಳು ಮತು ವಿವಿಧ ಸಂಘ ಸಂಸ್ಥೆಗಳು ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net