

ಮಂಡ್ಯ: ಬೆಂಗಳೂರಿನಲ್ಲಿ ಜ.23 ರಿಂದ 25ರವರೆಗೆ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಯಲಿದೆ. ಅದರ ಪ್ರಯುಕ್ತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೂರ್ವ ಕಾರ್ಯಕ್ರಮಗಳಾಗಿ ಕೃಷಿ ಹಾಗೂ ಸಿರಿಧಾನ್ಯ ಮೇಳವನ್ನು ಹಮ್ಮಿಕೊಳ್ಳಲಾಗುವುದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಗರದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿರಿಧಾನ್ಯ ಅತ್ಯಂತ ಆರೋಗ್ಯಯುತ ಆಹಾರ. ಅಂತೆಯೇ ರಾಜ್ಯ ಸರ್ಕಾರ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಧನ ನೀಡುತ್ತಿದೆ. ಸಿರಿಧಾನ್ಯ ಮೇಳದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟೀಯ ಮಟ್ಟದ ಮಾರಾಟಗಾರರು, ತಂತ್ರಜ್ಞಾನದ ಬಗ್ಗೆ ತಿಳಿಸುವ ಸಂಶೋಧಕರನ್ನೊಳಗೊಂಡಂತೆ ಅನೇಕ ಚರ್ಚೆ ನಡೆಯುತ್ತವೆ. ರೈತರು ಈ ಬಗ್ಗೆ ತಿಳಿದುಕೊಂಡು ಆರೋಗ್ಯಕರವಾದ ಆಹಾರವನ್ನು ಬೆಳೆಯಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಇಂದು ಸಿರಿಧಾನ್ಯ ನಡಿಗೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿರುವುದು ಸಂತೋಷವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ನಡೆಯುವ ಸಿರಿಧಾನ್ಯ ಮೇಳದಲ್ಲಿ ಎಲ್ಲರೂ ಭಾಗವಹಿಸುವುದರ ಜತೆಗೆ ಸಾರ್ವಜನಿಕರಿಗೆ ತಿಳಿಸಿ ಎಂದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದೆಂದೂ ಇಷ್ಟೊಂದು ವಿಜೃಂಭಣೆಯಿಂದ ಯಾವ ಕಾರ್ಯಕ್ರಮ ಮಂಡ್ಯದಲ್ಲಿ ನಡೆದಿರಲಿಲ್ಲ ಎಂಬ ಅಭಿಪ್ರಾಯವು ಮೂಡಿ ಬಂದಿದೆ. ಬಹಳ ಯಶಸ್ವಿಯಾಗಿ ಜರುಗುತ್ತಿದ್ದು, ಸಮ್ಮೇಳನದಲ್ಲಿ ನಡೆಯುವ ವಿಚಾರಗೋಷ್ಠಿ, ಮಳಿಗೆಗಳು, ವಸ್ತು ಪ್ರದರ್ಶನಗಳ ಸದುಪಯೋಗವನ್ನು ಪಡೆದುಕೊಳ್ಳಲು ಸಂಪೂರ್ಣ ಭಾಗವಹಿಸುವಿಕೆ ಇರಲಿ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ನಟ ಸಚ್ಚಿನ್ ಚಲುವರಾಯಸ್ವಾಮಿ ಇತರರಿದ್ದರು. ಸಿರಿಧಾನ್ಯ ನಡಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಆವರಣದಲ್ಲಿ ಸಮಾವೇಶಗೊಂಡಿತು.