

ಮೈಸೂರು: ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಿ. ಹಿಂದೆ ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರದ ಪ್ರಮುಖ ಭಾಗವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಮಾಜಿ ಪ್ರಧಾನಿ ಶ್ರೀ ಚೌದ್ರಿ ಚರಣ್‌ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಿರಿಧಾನ್ಯ ಮೇಳಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಂದು ರೈತ ಕುಟುಂಬ ಸ್ವಾವಲಂಬಿಯಾಗಿ ಉಳಿಯದ ಹೊರತು ಕೃಷಿ ಯಶಸ್ಸಿಗೆ ಮನ್ನಣೆಯಿಲ್ಲ. ಸಾಲವು ಬಡತನದ ನಿಕೃಷ್ಟ ಮೂಲವಾಗಿದೆ. ವೈಜ್ಞಾನಿಕ ಮಾರ್ಗ ಹಾಗೂ ಹೊಸ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಕೃಷಿ ಸಂಬಂಧಿತ ಸಮಸ್ಯೆಗಳಿಂದ ಹೊರಬರಬೇಕು. ಕೃಷಿ ಹಾಗೂ ಕೈಗಾರಿಕೆಗಳೆರಡೂ ಸಮನಾಂತರವಾಗಿ ಬೆಳವಣಿಗೆಯಾಗಬೇಕು. ಇದರಿಂದ ಆರ್ಥಿಕ ಪ್ರಗತಿ ಸಾಧ್ಯವಿದೆ ಎಂದರು.
ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಮಾತನಾಡಿ, ಸಿಎಫ್‌ಟಿಆರ್‌ಐ ಸಂಸ್ಥೆಯು 1950ರಲ್ಲಿ ಮೈಸೂರಿನಲ್ಲಿ ಆರಂಭವಾಗಿ ರೈತರಿಂದ ಉತ್ಪಾದನೆಯಾದ ವಸ್ತುಗಳಿಗೆ ಮೌಲ್ಯವರ್ಧನೆ ಮಾಡುವ ಕೆಲಸವನ್ನು ನಿರ್ವಹಿಸುತ್ತಿದೆ. ಸಿರಿಧಾನ್ಯಗಳ ಕುರಿತು ಪ್ರಸ್ತುತ 45 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, 85 ಜನ ಈ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ 15 ಜನ ಮಹಿಳೆಯರ ಒಳಗೊಂಡ ಆಸರೆ ಸಂಜೀವಿನಿ ಉದ್ಯೋಗ ತಂಡ ನಮ್ಮ ಸಂಸ್ಥೆಯಲ್ಲಿ ನಾಲ್ಕು ತಂತ್ರಜ್ಞಾನಗಳ ಕುರಿತು ತರಬೇತಿ ಪಡೆದು ಈಗ ಅಮೆಜಾನ್, ಫ್ಲಿಪ್‌ಕಾರ್ಟ್ ನಂತಹ ಸಂಸ್ಥೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದರು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು. ಕೃಷಿ ಜಂಟಿ ನಿರ್ದೇಶಕ ಡಾ. ಚಂದ್ರಶೇಖರ್, ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಕಲ್ಮಳ್ಳಿ ಶಿವಕುಮಾರ್, ಬನ್ನೂರು ನಾರಾಯಣ್ ಇತರರಿದ್ದರು.
ಸಿರಿಧಾನ್ಯದ ಮಹತ್ವ ಸಾರುತ್ತಿದೆ
ಮೇಳದಲ್ಲಿ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ತಯಾರಿಸಿರುವ ಸಿರಿಧಾನ್ಯದ ಪುಡಿ, ಸಿರಿಧಾನ್ಯದ ಕುರುಕಲು ತಿಂಡಿಗಳು ಹಾಗೂ ಹಲವು ಬಗೆಯ ತಿನಿಸುಗಳು ಗಮನ ಸೆಳೆಯುತ್ತಿವೆ. ಅಲ್ಲದೇ ಸಿರಿಧಾನ್ಯದ ಮಹತ್ವವನ್ನೂ ಸಾರುತ್ತಿದೆ.
ರಾಸಾಯನಿಕ ಮುಕ್ತ ಬೆಲ್ಲ, ಉಪ್ಪಿನಕಾಯಿ, ತೊಕ್ಕು, ಚಟ್ನಿಪುಡಿ ಪೌಡರ್, ಪಾರಂಪರಿಕ ಎತ್ತು ಚಾಲಿತ ಮರದ ಗಾಣದ ಎಣ್ಣೆ, ರಾಗಿ ಬೋಟಿ, ತೆಂಗಿನ ಕಾಯಿಯ ಉತ್ಪನ್ನಗಳು, ಬಾಳೆ ನಾರಿನ ಉತ್ಪನ್ನಗಳು, ಗೃಹ ಬಳಕೆ ಕೈ ಚೀಲಗಳು, ಸಿರಿಧಾನ್ಯದ ಚಿತ್ರವಿರುವ ಗ್ರಿಟಿಂಗ್ ಕಾರ್ಡ್‌ಗಳು ವಿಶೇಷ ಆಕರ್ಷಣೆಯಾಗಿವೆ.
ಕರ್ನಾಟಕ ಮಾತ್ರವಲ್ಲದೆ, ಇತರ ರಾಜ್ಯಗಳಲ್ಲೂ ಬೆಳೆಯುವ ಸಿರಿಧಾನ್ಯದ ತಳಿಗಳಿವೆ. ಸಿರಿಧಾನ್ಯಗಳನ್ನು ಬೆಳೆಯುವ ರೀತಿಯನ್ನೂ ತಿಳಿಸಿಕೊಡಲಾಗುತ್ತದೆ. ಸಿರಿಧಾನ್ಯದ ಬೀಜಗಳೂ ಮೇಳದಲ್ಲಿ ಸಿಗುತ್ತಿವೆ. ನಂದಿನಿ ಕೋಲ್ಡ್ ಹಾಲಿನ ಮಾದರಿಯಲ್ಲೇ ಮಾರುಕಟ್ಟೆಗೆ ರಾಗಿ ಅಂಬಲಿ, ಸಜ್ಜೆ ಗಂಜಿ ಮತ್ತು ಪೌಡರ್‌ಗಳು ಲಭ್ಯ ಇವೆ.