ರೈತರ ಆರ್ಥಿಕ ಪ್ರಗತಿಗೆ ಸಿರಿಧಾನ್ಯ ಪೂರಕ

Siridanya
Published on

* ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾಹಿತಿ

* ಜಿಲ್ಲಾಮಟ್ಟದ ಸಿರಿಧಾನ್ಯ ಮೇಳಕ್ಕೆ ಚಾಲನೆ

ರಾಮನಗರ

ಸಿರಿಧಾನ್ಯ ಬೆಳೆಯಲು ರಾಜ್ಯ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಹೆಚ್ಚಿನ ರೈತರು ಸಿರಿಧಾನ್ಯ ಬೆಳೆಯಲು ಮುಂದಾಗಬೇಕು ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಜಾಲಮಂಗಲ ರಸ್ತೆಯ ವಿಶ್ವನಾಥ ಕನ್ವೆನ್ಷನ್ ಹಾಲ್‌ನಲ್ಲಿ   ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.

ಈ ಹಿಂದೆ ವ್ಯವಸಾಯ ಪದ್ಧತಿಯಲ್ಲಿ ರೈತರು ಸಿರಿಧಾನ್ಯ ಬೆಳೆ ಪದ್ಧತಿ ರೂಢಿಸಿಕೊಂಡಿದ್ದರು. ಯಾವುದೇ ಬೆಳೆ ಬೆಳೆಯುತ್ತಿದ್ದರೂ ಜಮೀನಿನ ಒಂದು ಸಾಲಿನಲ್ಲಿ ಸಾಮೆ, ಮತ್ತೊಂದು ಕಡೆ ಸ್ವಲ್ಪ ಜಾಗವಿದ್ದಲ್ಲಿ ಅರ್ಕ ಹಾಗೂ ಹೆಚ್ಚು ನೀರು ನಿಲ್ಲುವ ಜಾಗದಲ್ಲಿ ಕೆಂಪಕ್ಕಿ ಬೆಳೆಯುತ್ತಿದ್ದರು. ಕಾಲಾಂತರದಲ್ಲಿ ಸಿರಿಧಾನ್ಯದ ಮಹತ್ವ ಅರ್ಥವಾಗಿದ್ದು ಸಿರಿಧಾನ್ಯ ಮೇಳಗಳು ರೈತರ ಆರ್ಥಿಕ ಪ್ರಗತಿಗೆ ಅನುಕೂಲವಾಗಿ ಪರಿಣಮಿಸಿವೆ ಎಂದು ಹೇಳಿದರು.

ರಾಮನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ವಾತನಾಡಿ, ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಸಿರಿಧಾನ್ಯ ಮೇಳಗಳು ಅನುಕೂಲವಾಗಿವೆ. ಅವನು ವ್ಯವಸಾಯ ವಾಡದಿದ್ದಲ್ಲಿ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೈತರ ಆರ್ಥಿಕ ಸ್ವಾವಲಂಬನೆಗೆ ಈ ರೀತಿಯ ಕಾರ್ಯಕ್ರಮ ಅತ್ಯಗತ್ಯ ಎಂದರು.

ದೇಶದಲ್ಲಿ ಶೇ.70 ಜನರು ಕೃಷಿ ಅವಲಂಬಿತರಾಗಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ರೈತರ ಅಭಿವದ್ಧಿ ಆಗುತ್ತಿಲ್ಲ. ಐದರಿಂದ ಹತ್ತು ಎಕರೆ ಜಮೀನು ಇದ್ದರೂ ರೈತರು ಆರ್ಥಿಕ ಅಭಿವದ್ಧಿ ಹೊಂದಲು ಸಾಕಷ್ಟು ಸವಾಲುಗಳಿವೆ. ಮುಖ್ಯವಾಗಿ ಕೂಲಿ ಕಾರ್ಮಿಕರ ಕೊರತೆ, ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲದಿರುವುದು ಕಾರಣವಾಗಿದೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜವಾನಿಗೆ 2000 ರೂ. ನೀಡುತ್ತಿರುವುದರಿಂದ ರೈತ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆರೋಗ್ಯ ಸಮಸ್ಯೆಯಿರುವ ಮಹಿಳೆಯರು ಆ ಹಣದಿಂದ ಸಣ್ಣ ಪುಟ್ಟ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುವಾರ್, ಜಿಲ್ಲಾ ಕೃಷಿಕ ಸವಾಜದ ಅಧ್ಯಕ್ಷ ಬಿ. ಗೋಪಾಲ್, ರಾಮನಗರ ತಾಲೂಕು ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಪ್ರತಿನಿಧಿ ನಿಂಗಪ್ಪ, ಖಜಾಂಚಿ ಗಿರೀಶ್ ತೋಟದ ಮನೆ, ವಾಗಡಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷರಾದ ನಿಂಗೇಗೌಡ, ಶಾಂತಪ್ಪ, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎನ್. ಅಂಬಿಕಾ, ಮಂಡ್ಯ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು ಇತರರು ಇದ್ದರು. ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಉಮೇಶ್ ಡಿ ಸ್ವಾಗತಿಸಿದರು. ಇದೇ ವೇಳೆ ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಆರ್ಥಿಕ ಬಲವರ್ಧನಗೆ ಪ್ರೋತ್ಸಾಹ

ರೈತರ ಸಂಕಷ್ಟಗಳಿಗೆ ರಾಜ್ಯ ಸರ್ಕಾರ ಸದಾ ಸ್ಪಂದಿಸುತ್ತಿದೆ, ಅದಕ್ಕಾಗಿ ಈ ರೀತಿಯ ಮೇಳ ಆಯೋಜಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಬಲಗೊಳಿಸಲು ಪ್ರೋತ್ಸಾಹಿಸಲಾಗುತ್ತಿದೆ. ಕಾಲಕ್ರಮೇಣ ಆಹಾರ ಶೈಲಿಯಲ್ಲಿ ಬದಲಾದ ಪರಿಣಾಮ ಬಿಪಿ, ಸಕ್ಕರೆ ಸೇರಿ ಇತರ ಕಾಯಿಲೆಗಳು ಬರುತ್ತವೆ. ಸಿರಿಧಾನ್ಯಗಳನ್ನು ಆಹಾರದಲ್ಲಿ ಉಪಯೋಗಿಸಿದರೆ ಉತ್ತಮ ಆರೋಗ್ಯದಿಂದ ಇರಬಹುದಾಗಿದೆ. ಜಿಲ್ಲೆಯಲ್ಲಿ ರೇಷ್ಮೆ ಹಾಗೂ ಹಾಲಿಗೆ ಉತ್ತಮ ಪ್ರೋತ್ಸಾಹವಿದ್ದು, ಸಿರಿಧಾನ್ಯದತ್ತಲು ರೈತರು ಚಿತ್ತ ಹರಿಸಬೇಕು. ಈ ರೀತಿಯ ಕಾರ್ಯಕ್ರಮಗಳು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸುತ್ತದೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net