

ಮೈಸೂರು: ಪೌಷ್ಟಿಕವಾಗಿ ಮತ್ತು ಪರಿಸರಕ್ಕೆ ಪೂರಕವಾಗಿರುವ ಸಿರಿಧಾನ್ಯ ಆಹಾರ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಕೇಂದ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್), ರಾಷ್ಟ್ರೀಯ ವಿಜ್ಞಾನ ಸಂವಹನ ಮತ್ತು ಮಾಹಿತಿ ಸಂಪನ್ಮೂಲಗಳ ಸಂಸ್ಥೆಯ ನಿರ್ದೇಶಕಿ ಪ್ರೊ.ರಂಜನಾ ಅಗರವಾಲ್ ಹೇಳಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಗುರುವಾರ ಏರ್ಪಡಿಸಿದ್ದ 2 ದಿನಗಳ ಆಹಾರ ಹಾಗೂ ಸಿರಿಧಾನ್ಯ ತಂತ್ರಜ್ಞಾನ ಪ್ರದರ್ಶನ ಹಾಗೂ ಸಂಪರ್ಕ ಸಮ್ಮೇಳನದಲ್ಲಿ ಮಾತನಾಡಿದರು.
ಜೀವನಶೈಲಿಯಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತಿದೆ. ಸಾಂಪ್ರದಾಯಿಕ ಆಹಾರ ಪದ್ಧತಿಯಾದ ಸಿರಿಧಾನ್ಯ ಬಳಕೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಆಹಾರ ತಂತ್ರಜ್ಞಾನ ಪ್ರಗತಿ ಹೊಂದಬೇಕು. ಈಗಿರುವ ತಂತ್ರಜ್ಞಾನಗಳೂ ಸಹ ಇನ್ನಷ್ಟು ಸುಧಾರಣೆ, ಕಾರ್ಯಕ್ಷಮತೆಯನ್ನು ವೃದ್ಧಿಸಬೇಕಿದೆ ಎಂದರು.
ಕಿರು ಉದ್ಯಮವನ್ನು ಸ್ಥಾಪನೆ ಮಾಡಿ ಸುಸ್ಥಿರ ಗ್ರಾಮಗಳ ಪ್ರಗತಿಗೆ ಸಿಎಸ್‌ಐಆರ್ ಕೆಲಸ ಮಾಡುತ್ತಿದೆ. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಕೊಡಲಾಗುತ್ತಿದೆ. ಜತೆಗೆ, ಕರೊನಾ ನಂತರ ಗ್ರಾಮ ಮತ್ತು ನಗರ ಪ್ರದೇಶವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ನಗರದಿಂದ ಗ್ರಾಮಕ್ಕೆ ವಲಸೆ ಹೆಚ್ಚಾದಾಗ, ಭೂಮಿ ಇಲ್ಲದ ವಿದ್ಯಾವಂತರಿಗೆ ಉದ್ಯಮ ಕಟ್ಟುವ ಅಗತ್ಯ ತಂತ್ರಜ್ಞಾನವನ್ನು ತನ್ನ ಅಂಗ ಸಂಸ್ಥೆಗಳಿಂದ ನೀಡಿದೆ. ಅದಕ್ಕಾಗಿ ವಿಜ್ಞಾನ ಭಾರತಿ ಹಾಗೂ ಉನ್ನತ್ ಭಾರತ್ ಅಭಿಯಾನವನ್ನು ಬಳಸಿಕೊಳ್ಳಲಾಯಿತು ಎಂದು ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ಸಂವಹನ ಮತ್ತು ಮಾಹಿತಿ ಸಂಪನ್ಮೂಲಗಳ ಸಂಸ್ಥೆ ನೀತಿ ನಿರೂಪಣೆ ಕೆಲಸ ಮಾಡಿದ್ದರೆ, ಸಿಎಸ್‌ಐಆರ್ ವತಿಯಿಂದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಪೇಟೆಂಟ್ ಪಡೆಯುವ ಕೆಲಸದಲ್ಲಿ ಸಕ್ರಿಯವಾಗಿದೆ. ಸಿಎಸ್‌ಐಆರ್ ವತಿಯಿಂದ 37 ಅಂಗ ಸಂಸ್ಥೆಗಳು ದೇಶದಾದ್ಯಂತ ಸ್ವಾವಲಂಬಿ ಬದುಕು ರೂಪಿಸುತ್ತಿವೆ. ಭಾರತದ ಆರ್ಥಿಕತೆಯನ್ನು ಹೆಚ್ಚಿಸುವ ಗುರಿ ಹಾಕಿಕೊಂಡಿರುವ ಸಿಎಸ್‌ಐಆರ್ ವಿಜ್ಞಾನ ಹಾಗೂ ಸಮಾಜದ ನಡುವೆ ಸೇತುವೆಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಿಎಫ್‌ಟಿಆರ್‌ಐ ನಿರ್ದೇಶಕಿ ಪ್ರೊ.ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ಆಹಾರ ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಇದೀಗ ಆಹಾರ ಸುರಕ್ಷತೆ, ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಲು ತಪಾಸಣೆ ಕಾರ್ಯವನ್ನೂ ನಮ್ಮ ಸಂಸ್ಥೆ ನಿರ್ವಹಿಸುತ್ತಿದೆ ಎಂದರು.
ಸಾಂಪ್ರದಾಯಿಕ ಸಿದ್ಧ ಆಹಾರಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ದೋಸೆ, ಇಡ್ಲಿ, ಚಪಾತಿ ಇನ್ನಿತರ ಸಾಂಪ್ರದಾಯಿಕ ಆಹಾರ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉದ್ಯಮದಾರರಿಗೆ ಬಳಕೆಗೆ ಪರವಾನಗಿ ಕಲ್ಪಿಸಿಕೊಡಲಾಗುತ್ತಿದೆ. ಸಂಸ್ಥೆಯ ತಂತ್ರಜ್ಞಾನವನ್ನು ಯುವ ಸಮುದಾಯ ಬಳಸಿಕೊಂಡು ಉದ್ಯಮ ಸ್ಥಾಪಿಸಬೇಕು. ನವೋದ್ಯಮಿಗಳಾಗುವ ಮೂಲಕ ಉದ್ಯೋಗ ಸೃಷ್ಟಿಸಬೇಕು. ತಂತ್ರಜ್ಞಾನವಷ್ಟೇ ಅಲ್ಲದೇ ಕೌಶಲ ಹಾಗೂ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು.
ದೇಶವು 20 ವಾಯುಗುಣ ವಲಯ ಹೊಂದಿದ್ದು, ವಿಭಿನ್ನ ಸ್ಥಳೀಯ ಆಹಾರ ಕ್ರಮ ಬಳಕೆಯಲ್ಲಿದೆ. ಹಸಿವು, ಅಪೌಷ್ಟಿಕತೆ ಹೋಗಲಾಡಿಸಲು ಹಾಗೂ ಆಹಾರ ವೈವಿಧ್ಯವನ್ನು ಉಳಿಸಿಕೊಳ್ಳುವ ಸಂಶೋಧನೆಯಲ್ಲಿ ನಮ್ಮ ಸಂಸ್ಥೆ ತೊಡಗಿಕೊಂಡಿದೆ. ಬಿತ್ತನೆ ನಂತರ ಆಹಾರ ನಷ್ಟವನ್ನು ತಪ್ಪಿಸಿದೆ. ಏಷ್ಯದಲ್ಲೇ ಪಾರ್ ಬಾಯ್ಲಿಂಗ್ ಅಕ್ಕಿ, ಗೋಧಿ ತಂತ್ರಜ್ಞಾನ ಮೊದಲು ಪರಿಚಯಿಸಿತ್ತು ಎಂದು ವಿವರಿಸಿದರು.
74 ವರ್ಷಗಳಿಂದಲೂ ಸಂಸ್ಥೆಯು ಆಹಾರ ಸಂಶೋಧನೆಯನ್ನು ನಡೆಸಿ, 400ಕ್ಕೂ ಉತ್ಪನ್ನಗಳನ್ನು ಆವಿಷ್ಕರಿಸಿದೆ. ಇಲ್ಲಿ ಎಂಎಸ್ಸಿ (ಆಹಾರ ತಂತ್ರಜ್ಞಾನ) ಕಲಿತವರೂ ಜಗತ್ತಿನ ಎಲ್ಲ ದೇಶಗಳ ಆಹಾರ ಸಂಸ್ಥೆಗಳು, ಕಂಪನಿಗಳಿಗೆ ನೆರವಾಗಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯು ದೇಶಕ್ಕೆ ಆಹಾರ ಭದ್ರತೆ ತಂದುಕೊಡಲು ಶ್ರಮಿಸಿದೆ. ಮೈಸೂರಿನಲ್ಲಷ್ಟೇ ಅಲ್ಲದೇ ಲಖನೌ, ಹೈದರಾಬಾದ್, ಮುಂಬೈನಲ್ಲೂ ವಿಭಾಗೀಯ ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ದೇಶ ಆಹಾರ ಉತ್ಪಾದನೆಯಲ್ಲಿ ಸಾಧನೆ ಮಾಡಿದ್ದು, ದೊಟ್ಟಮಟ್ಟದ ಆರ್ಥಿಕ ವಹಿವಾಟು ಸಹ ನಡೆಸುತ್ತಿದೆ. ಇದರಲ್ಲಿ ಸಿಎಫ್‌ಟಿಆರ್‌ಐ ಪಾತ್ರ ಇದೆ. ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ಬದಲಾವಣೆಗೆ ಪ್ರವರ್ತಕ ಸಂಸ್ಥೆಯಾಗಿದ್ದು, ಆಹಾರ ಉಪಉತ್ಪನ್ನಗಳ ಉತ್ಪಾದನೆಯೊಂದಿಗೆ ಅವುಗಳಿಗೆ ಮೌಲ್ಯವರ್ಧನಗೊಳಿಸುವ ಕೆಲಸವನ್ನೂ ಮಾಡುತ್ತಿದೆ ಎಂದರು.
ಉನ್ನತ್ ಭಾರತ್ ಅಭಿಯಾನದ ರಾಷ್ಟ್ರೀಯ ಸಂಯೋಜಕ ಪ್ರೊ.ವೀರೇಂದ್ರ ಕೆ.ವಿಜಯ್, ಸಿಎಸ್‌ಐಆರ್ ವಿಜ್ಞಾನಿ ಪ್ರೊ.ಯೋಗೇಶ್ ಸುಮನ್, ಉದ್ಯಮಿ ಸ್ಯಾಮ್ ಚೆರಿಯನ್, ಎನ್.ಪಿ.ರಾಜೀವ್ ಪಾಲ್ಗೊಂಡಿದ್ದರು.