ಸಿರಿಧಾನ್ಯ ಆರೋಗ್ಯಯುತ ಆಹಾರ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Cereal Festival Minister Chaluvarayaswamy mandya
Published on

ಮಂಡ್ಯ: ಸಿರಿಧಾನ್ಯಗಳಿಂದ ರುಚಿಕರ ಆಹಾರ ತಯಾರಿಸಬಹುದು ಎನ್ನುವುದನ್ನು ಈಗಾಗಲೇ ತೋರಿಸಿಕೊಡಲಾಗಿದೆ. ಸಿರಿಧಾನ್ಯ ರುಚಿಕರ ಹಾಗೂ ಆರೋಗ್ಯಯುತ ಆಹಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಆಯೋಜಿಸಿದ್ದ ಸಿರಿಧಾನ್ಯ ಹಬ್ಬದಲ್ಲಿ ಗಾಯಕ ವಾಸುಕಿ ವೈಭವ್ ಅವರ ಸಾವಯವ ಸಿರಿಧಾನ್ಯ ಅರಿವು ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾರ್ವಜನಿಕರು ಹೆಚ್ಚು ಸಾವಯವ ಹಾಗೂ ಸಿರಿಧಾನ್ಯ ಆಹಾರ ಹೆಚ್ಚು ಬಳಸಬೇಕು ಎಂಬ ಉದ್ದೇಶದಿಂದ ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಾವಯವ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಹತ್ತು ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಸಿರಿಧಾನ್ಯದ ಬೇಡಿಕೆ ಹೆಚ್ಚಿಸಲು ಹೊರದೇಶಕ್ಕೆ ರಫ್ತು ಮಾಡಲು ಚಿಂತಿಸಲಾಗುತ್ತಿದೆ ಎಂದರು.

ಸಿರಿಧಾನ್ಯ ಇತ್ತೀಚೆಗೆ ಸಾರ್ವಜನಿಕರಲ್ಲಿ ಉಂಟಾಗುವ ಕಾಯಿಲೆಗಳಿಗೆ ರಾಮಬಾಣ. ರೈತರಿಗೂ ಸಿರಿಧಾನ್ಯ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಇದಕ್ಕೆ ಹೆಚ್ಚಿನ ಕೀಟನಾಶಕ, ರಾಸಾಯನಿಕ ಸಿಂಪರಣೆ ಮಾಡುವುದಿಲ್ಲ. ಹಾಗಾಗಿ ಸಿರಿಧಾನ್ಯ ರೈತ ಸ್ನೇಹಿ ಬೆಳೆ ಎಂದರು.

ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಜ.5ರಿಂದ 7ರವರೆಗೆ ರೈತರಿಗೆ ಮಾಹಿತಿ ನೀಡಲು ಆಯೋಜಿಸಿರುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದಲ್ಲಿ ಹೆಚ್ಚಿನ ರೈತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ದೇಹಕ್ಕೆ ಬೇಕಿರುವ ಆಹಾರ ಸೇವಿಸಿ, ಮನಸ್ಸಿಗೆ ಆಸೆಯಾಗುವ ಆಹಾರ ಸೇವಿಸಬೇಡಿ. ಸಿರಿಧಾನ್ಯ ಸೇವಿಸಿ ರೋಗಗಳಿಂದ ದೂರವಿರಿ ಎಂದು ಸಲಹೆ ನೀಡಿದರು.

ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕದಲೂರು ಉದಯ್, ಎಚ್.ಟಿ.ಮಂಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಗಾಯಕ ವಾಸುಕಿ ವೈಭವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net