

ಮಂಡ್ಯ: ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಸಾವಯವ ಮೇಳದ ಅಂಗವಾಗಿ ಜ.2ರಂದು ನಗರದಲ್ಲಿ ಸಿರಿಧಾನ್ಯ ಹಬ್ಬವನ್ನು ಆಯೋಜಿಸಲಾಗಿದೆ. ಅದರಂತೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಜ್ಜಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯಿಂದ ಹಲವು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಂತೆ ಇಡೀ ದಿನ ಸಾರ್ವಜನಿಕರಿಗೆ ಮನರಂಜನೆ ಸಿಗಲಿದೆ. ಪ್ರಮುಖವಾಗಿ ಜಿಲ್ಲಾಮಟ್ಟದ ಸಾವಯುವ ಸಂತೆ ನಡೆಯಲಿದ್ದು, ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಬೆಳೆಗಳ ಪ್ರದರ್ಶನ ಮತ್ತು ಮಾರಾಟವಿರಲಿದೆ. ಮಹಿಳೆಯರಿಗಾಗಿ ಬೆಳಗ್ಗೆ 10ಗಂಟೆಗೆ ಸಿರಿಧಾನ್ಯ ಪಾಕ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನವಿರಲಿದೆ.
ಪುರುಷರಿಗೆ ಮಧ್ಯಾಹ್ನ 12ಗಂಟೆಗೆ ರಾಗಿಮುದ್ದೆ ಹಾಗೂ ನಾಟಿಕೋಳಿ ಸಾರು ಊಟದ ಸ್ಪರ್ಧೆ ಆಯೋಜಿಸಿದ್ದು, ಗೆದ್ದವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಆಹಾರ ಮೇಳ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ತಿಂಡಿಗಳ ಮಾರಾಟವಿರಲಿದೆ. ಅಂತೆಯೇ ಬೆಲ್ಲದ ಪರಿಷೆಯನ್ನು ಆಯೋಜಿಸಲಾಗಿದೆ. ರೈತರಿಗೆ ಅಗತ್ಯ ಮಾಹಿತಿ ಕೊಡಲು 2.30ಕ್ಕೆ ತಾಂತ್ರಿಕ ಅಧಿವೇಶನವಿರಲಿದೆ. ಸಿರಿಧಾನ್ಯದ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಅವಕಾಶ ಕುರಿತು ಮೈಸೂರಿನ ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಹಾಗೂ ಉತ್ತಮ ಆರೋಗ್ಯಕ್ಕಾಗಿ ಸಾವಯವ ಹಾಗೂ ಸಿರಿಧಾನ್ಯ ಕುರಿತು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ ವಿಷಯ ಮಂಡಿಸಲಿದ್ದಾರೆ. ಸಂಜೆ 5.30ಕ್ಕೆ ಸಿರಿಧಾನ್ಯ ಹಬ್ಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ರವಿಕುಮಾರ್ ಗಣಿಗ ವಹಿಸಲಿದ್ದಾರೆ.
ಸಿರಿಧಾನ್ಯದ ಗೀತೆ ಬಿಡುಗಡೆ: ಸಾವಯವ ಸಿರಿಧಾನ್ಯ ಕುರಿತು ರಚಿಸಿ ಹಾಡಿರುವ ಗಾಯಕ ವಾಸುಕಿ ವೈಭವ್ ಗೀತೆಯನ್ನು ಸಂಜೆ 4.30ಕ್ಕೆ ಬಿಡುಗಡೆ ಮಾಡಲಾಗುವುದು. ಖ್ಯಾತಿ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ವಿಚಾರ ಮಂಡನೆ ಮಾಡಲಿದ್ದಾರೆ. ಅಂತೆಯೇ ಅರ್ಪಿಸುತ್ತಿರುವ ರಸ ಸಂಜೆ ನಡೆಯಲಿದೆ.