

ಮಂಡ್ಯ: ಬೆಂಗಳೂರಿನಲ್ಲಿ ಜ.5ರಿಂದ 7ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಸಾವಯವ ಮೇಳದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ‘ಸಿರಿಧಾನ್ಯ ಹಬ್ಬ’ ಆಕರ್ಷಕ ಕಾರ್ಯಕ್ರಮದೊಂದಿಗೆ ಗಮನಸೆಳೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯಿಂದ ಹಲವು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಇಡೀ ದಿನ ಸಾರ್ವಜನಿಕರಿಗೆ ಮನರಂಜನೆ ಸಿಕ್ಕಿತು. ಜಿಲ್ಲಾಮಟ್ಟದ ಸಾವಯುವ ಸಂತೆ ನಡೆಯಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಬೆಳೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಅಂತೆಯೇ ಸಾವಯವ ಪದಾರ್ಥದಿಂದ ತಯಾರಿಸಿದ ವಿವಿಧ ರೀತಿಯ ತಿಂಡಿ, ತಿನಿಸುಗಳ ಮಾರಾಟ ಮಾಡಲಾಯಿತು. ವಿವಿಧೆಡೆಯಿಂದ ಆಗಮಿಸಿದ ಜನರು ಸಿರಿಧಾನ್ಯ ಹಬ್ಬದಲ್ಲಿ ಪಾಲ್ಗೊಂಡರು.
10 ಮುದ್ದೆ ತಿಂದ ಮೀಸೆ ಈರೇಗೌಡ್ರು: ಸಿರಿಧಾನ್ಯ ಹಬ್ಬದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಆಕರ್ಷಣೆಯ ಭಾಗ ನಾಟಿ ಕೋಳಿ ಸಾರಿನಲ್ಲಿ ಮುದ್ದೆ ಉಣ್ಣುವ ಸ್ಪರ್ಧೆ. ಅದರಂತೆ ಸ್ಪರ್ಧಿಗಳು ಭಾಗವಹಿಸಿದ್ದರು. ನಿಗದಿಪಡಿಸಲಾಗಿದ್ದ 20 ನಿಮಿಷದ ಸಮಯದಲ್ಲಿ ಯಾರು ಅತಿ ಹೆಚ್ಚು ಮುದ್ದೆ ತಿನ್ನುತ್ತಾರೆಯೋ ಅವರು ವಿಜಯಶಾಲಿಗಳು ಎಂದು ಘೋಷಿಸಲಾಗಿತ್ತು. ಮೊದಲು ಎಲ್ಲರ ತಟ್ಟೆಗೂ ಎರಡು ಮುದ್ದೆ, ನಾಟಿ ಕೋಳಿ ಮಾಂಸ, ಒಂದು ಮೊಟ್ಟೆ, ನಾಟಿ ಕೋಳಿ ಸಾರು ಹಾಕಿ ಆನಂತರ ಒಮ್ಮೆಗೆ ತೀರ್ಪುಗಾರರು ಊಟಕ್ಕೆ ಚಾಲನೆ ಕೊಟ್ಟರು. ಮುದ್ದೆ ಖಾಲಿಯಾಗುತ್ತಿದ್ದಂತೆ ತಟ್ಟೆಗೆ ಬಿಸಿ ಬಿಸಿ ಮುದ್ದೆ ಬಂದುಬೀಳುತ್ತಿದ್ದವು.
ನಿಗದಿತ ಕಾಲಾವಕಾಶದಲ್ಲಿ 2 ಕೆಜಿ 717 ಗ್ರಾಂ ಮುದ್ದೆ ತಿಂದ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮದ ಮೀಸೆ ಈರೇಗೌಡ ಪ್ರಥಮ ಬಹುಮಾನ ಪಡೆದರು. ಅಂತೆಯೇ ಶ್ರೀರಂಗಪಟ್ಟಣದ ದಿಲೀಪ್ 1 ಕೆಜಿ 652 ಗ್ರಾಂ ತೂಕದ ಮುದ್ದೆ ಉಂಡು ಎರಡನೇ ಹಾಗೂ ಶ್ರೀರಂಗಪಟ್ಟಣದ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ರವೀಂದ್ರ 1 ಕೆಜಿ 544 ಗ್ರಾಂ ತೂಕದ ಮುದ್ದೆ ಉಂಡು ಮೂರನೇ ಬಹುಮಾನ ಪಡೆದರು. ಇವರಿಗೆ ಕ್ರಮವಾಗಿ 3 ಸಾವಿರ ರೂ, 2 ಸಾವಿರ ರೂ, ಒಂದು ಸಾವಿರ ರೂ ನಗದು ಬಹುಮಾನದ ಜತೆಗೆ ಪ್ರಶಸ್ತಿ ಪತ್ರ ನೀಡಲಾಯಿತು.
ವಿಶೇಷವೆಂದರೆ ಸ್ಪರ್ಧೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಕೂಡ ಪಾಲ್ಗೊಂಡರು. ಮಾತ್ರವಲ್ಲದೆ 1 ಕೆಜಿ 342 ಗ್ರಾಂ ಮುದ್ದೆ ತಿಂದು ಗಮನಸೆಳೆದರು. ಇನ್ನು ಬಿ.ಹೊಸೂರಿನ ಸಂತೋಷ್, ಬುರುಡುಗುಂಟೆಯ ಸುಜಾತಾ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ್, ಎಚ್.ಮಲ್ಲಿಗೆರೆ ಗ್ರಾಮದ ಕುಮಾರ್, ಕೆ.ಆರ್.ಪೇಟೆಯ ಶಂಕರ್ ಭಾಗವಹಿಸಿದ್ದರು.
ಇನ್ನು ಸಿರಿಧಾನ್ಯ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಪಾಕ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ 40 ಮಹಿಳೆಯರು ಭಾಗವಹಿಸಿದ್ದರು. ಆದರೆ ಆಯೋಜಕರು ಹಾಗೂ ಇತರೆ ಸ್ಪರ್ಧಿಗಳ ಅನುಮತಿ ಮೇರೆಗೆ ಪುರುಷರು ಕೂಡ ಪಾಲ್ಗೊಂಡು ಗಮನಸೆಳೆದರು. ಸಿರಿಧಾನ್ಯ ಪದಾರ್ಥ ಬಳಸಿ ವೈವಿಧ್ಯಮ ಅಡುಗೆ ಸಿದ್ದಪಡಿಸಿದರು. ಅಂತಿಮವಾಗಿ ಹುಲಿವಾನ ಗ್ರಾಮದ ಪ್ರೀತಿ ಶಂಕರ್(ಪ್ರ), ಕೊತ್ತತ್ತಿಯ ಗಂಗಾದೇವಿ(ದ್ವಿ), ಮಂಡ್ಯದ ಮಹೇಶ್(ತೃ) ಬಹುಮಾನ ಪಡೆದರು. ಬೇವಿನಹಳ್ಳಿ ಗ್ರಾಮದ ನಂದಿನಿ ಮತ್ತು ಸುವರ್ಣ, ಹುಲಿವಾನದ ಪ್ರಮೀಳಾ ಸಮಾಧಾನಕಾರ ಬಹುಮಾನ ಪಡೆದುಕೊಂಡರು.