

ಮಾಂಜರಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಶಿವಶಕ್ತಿ ಶುಗರ್ ಲಿಮಿಟೆಡ್, ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿ ಹಾರ್ಮ್ಸ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಯಡ್ರಾವ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅಂಕಲಿಯ ಶಿವಾಲಯದಲ್ಲಿ ಆಹಾರ ಪದಾರ್ಥಗಳಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತು ಮಹಿಳೆಯರಿಗೆ ಉಪನ್ಯಾಸ ಕಾರ್ಯಕ್ರಮ ಶುಕ್ರವಾರ ಜರುಗಿತು.
ಡಾ. ಪ್ರಭಾಕರ ಕೋರೆ ಹುಟ್ಟುಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಬಿ.ಆರ್. ಪಾಟೀಲ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದಿನ ಕಾಲದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳಾದ ನವಣೆ, ರಾಗಿ, ಬರಗು, ಸಾವೆ ಹೇರಳವಾಗಿ ಬಳಸುತ್ತಿದ್ದರು. ಆದ್ದರಿಂದ ಜನರ ಆರೋಗ್ಯ ಉತ್ತಮವಾಗಿತ್ತು. ಸಿರಿಧಾನ್ಯಗಳು ಉತ್ತಮ ಪೋಷಕಾಂಶ ಹೊಂದಿರುವುದರಿಂದ ಹೆಚ್ಚು ಬಳಸಬೇಕು ಎಂದು ಸಲಹೆ ನೀಡಿದರು. ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಭರತೇಶ ಬನವಣೆ ಮಾತನಾಡಿ, ಗಟ್ಟಿಯಾದ ಶರೀರ ಹಾಗೂ ದೀರ್ಘಾಯುಷ್ಯ ಪಡೆಯಲು ದಿನನಿತ್ಯ ಅಡುಗೆಯಲ್ಲಿ ಸಿರಿಧಾನ್ಯ ಬಳಸಬೇಕು ಎಂದರು. ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಮಾತನಾಡಿ, ಸಿರಿಧಾನ್ಯಗಳು ಪ್ರೊಟೀನ್, ಕಾರ್ಬೋಹೈಡ್ರೇಟ್, ಖನಿಜಾಂಶಗಳಾದ ಪೊಟ್ಯಾಷಿಯಂ, ರಂಜಕ, ಸತುವು ಹಾಗೂ ಉತ್ತಮ ನಾರಿನಾಂಶ ಹೊಂದಿದ್ದು, ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸಾತ್ಮಕ ಗುಣ ಒಳಗೊಂಡಿವೆ. ಮಹಿಳೆಯರು ಸಿರಿಧಾನ್ಯ ಖಾದ್ಯ ತಯಾರಿಸಿ ಉಪಯೋಗಿಸಲು ಕರೆ ನೀಡಿದರು. ಮಲ್ಲಪ್ಪ ಮಹಿಸ್ಯಾಳೆ, ಗ್ರಾಪಂ ಅಧ್ಯಕ್ಷ ಅಜಿತ್ ಉಮರಾಣಿ, ಸುರೇಶ ಪಾಟೀಲ, ಶಿದಗೌಡ ಮಗದುಮ್ಮ, ಪಿಂಟು ಹಿರೇಕುರುಬರ, ಅಶೋಕ ಚೌಗಲಾ, ಅನಿಲ ಪಾಟೀಲ, ಸಂಸ್ಥೆಯ ಆಜೀವ ಸದಸ್ಯ ಬಿ.ಎಸ್.ಅಂಬಿ ಇದ್ದರು. ಸುಮಾರು 500 ಮಹಿಳೆಯರು ಭಾಗವಹಿಸಿದ್ದರು.