ಆಹಾರ ಮೇಳಕ್ಕೆ ಸಿರಿಧಾನ್ಯ, ಸಾವಯವ ಸ್ಪರ್ಶ

food
Published on
  • ಅವಿನಾಶ್ ಜೈನಹಳ್ಳಿ ಮೈಸೂರು
    ಪಾರಂಪರಿಕ ತಿನಿಸು, ಬುಡಕಟ್ಟು ಶೈಲಿಯ ಬೊಂಬು ಬಿರಿಯಾನಿ, ಬಿದಿರಕ್ಕಿ ಪಾಯಸ, ಸಿರಿಧಾನ್ಯಗಳ ಉಪಾಹಾರ…!
    ರಾಜ್ಯ, ಹೊರರಾಜ್ಯ, ದೇಶ-ವಿದೇಶಗಳ ಬಗೆ ಬಗೆಯ ಆಹಾರಗಳನ್ನು ಆಹಾರ ಪ್ರಿಯರಿಗೆ ಉಣಬಡಿಸಲು ದಸರಾ ಆಹಾರ ಮೇಳ ಉಪ ಸಮಿತಿ ಮುಂದಾಗಿದೆ. ಈ ಬಾರಿಯೂ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ ದಸರಾ ಆಹಾರ ಮೇಳಕ್ಕೆ ಸಿದ್ಧತೆ ಶುರುವಾಗಿದೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 3ರವರೆಗೆ ‘ಜನಪ್ರಿಯ ಆಹಾರ ಮೇಳ’ ನಡೆಯಲಿದೆ.
    ನಾನಾ ವಿಶೇಷ: ಬುಡಕಟ್ಟು ಶೈಲಿ ಸೇರಿದಂತೆ ಈ ಬಾರಿ ಸಹಜ ಕೃಷಿ ಆಹಾರಗಳು, ಮೈಸೂರು, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಉತ್ತರಭಾರತ, ಟಿಬೆಟಿಯನ್, ಕಾಶ್ಮೀರಿ, ರಾಜಸ್ಥಾನಿ, ಈಶಾನ್ಯ ಭಾರತ, ಮರಾಠಿ ಶೈಲಿಯ ಆಹಾರಗಳನ್ನು ಆಹಾರ ಪ್ರಿಯರು ಸವಿಯಬಹುದು. ಇದರೊಂದಿಗೆ ವಿವಿಧ ರೀತಿಯ ಚಾಕೊಲೇಟ್, ಹಣ್ಣು ಮತ್ತು ಹಣ್ಣಿನ ರಸ, ಸಾಂಪ್ರದಾಯಿಕ ಸಿಹಿ ತಿಂಡಿಗಳು, ಚಾಟ್ಸ್ ಸೇರಿದಂತೆ ನಾನಾ ಬಗೆಯ ತಿಂಡಿಗಳು ಮೇಳದಲ್ಲಿ ಸಿಗಲಿವೆ. ವಿಶೇವಾಗಿ ಸಿರಿಧಾನ್ಯ, ಸಹಜ, ಸಾವಯವ ಧಾನ್ಯಗಳಿಂದ ತಯಾರಿಸುವ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
    ವಿದೇಶಿ ರುಚಿ: ಈ ಬಾರಿ ವಿಶೇಷವಾಗಿ ಚೈನೀಸ್, ಇಟಾಲಿಯನ್, ಫ್ರೆಂಚ್ ಹಾಗೂ ಆಫ್ರಿಕನ್ ಶೈಲಿಯ ವಿಭಿನ್ನ ತಿನಿಸುಗಳನ್ನು ಪರಿಚಯಿಸಲು ಸಿದ್ಧತೆ ನಡೆಯುತ್ತಿದೆ. ಎಲ್ಲ ವರ್ಗದ ಜನರ ಅಭಿರುಚಿ ಗಮನದಲ್ಲಿರಿಸಿಕೊಂಡು ವೈವಿಧ್ಯಮಯವಾಗಿಸಲು ಉದ್ದೇಶಿಸಲಾಗಿದೆ. ಮೇಳದಲ್ಲಿ ದೇಶಿಯ ಮತ್ತು ಖಂಡಾಂತರ ಆಹಾರ ಪದ್ಧತಿಯ ಜತೆಗೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯಮಯ ಊಟೋಪಚಾರಗಳನ್ನು ಅಳವಡಿಸಲಾಗುತ್ತದೆ. ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧ್ಯಾನಗಳು, ಹಣ್ಣು-ಹಂಪಲು, ತರಕಾರಿ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಉಣಬಡಿಸಲು ಉದ್ದೇಶಿಸಲಾಗಿದೆ ಎಂದು ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ನಾನಾ ಸ್ಪರ್ಧೆ: ಪ್ರತಿ ವರ್ಷದಂತೆ ಈ ಬಾರಿಯೂ ಮೇಳದಲ್ಲಿ ಅಡುಗೆ, ಭೋಜನ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಮೇಳ ನಡೆಯುವ ಅಷ್ಟು ದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿವೆ. ಹಾಸ್ಯಸಂಜೆ, ಮಿಮಿಕ್ರಿ, ಮ್ಯಾಜಿಕ್ ಶೋ, ನೃತ್ಯ, ಸಂಗೀತ ಕಾರ್ಯಕ್ರಮಗಳು ಕಳೆಗಟ್ಟಲಿವೆ. ಅದಕ್ಕಾಗಿ, ರಾಜ್ಯ ಮತ್ತು ರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸಿ ವಿಭಿನ್ನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
  • 150 ರಿಂದ 170 ಮಳಿಗೆ: ಆಹಾರ ಮೇಳ ನಡೆಯುವ ಎರಡು ಕಡೆಗಳಿಂದ 150 ರಿಂದ 170 ಮಳಿಗೆಗಳಿಗೆ ಅವಕಾಶ ನೀಡಲು ಚಿಂತಿಸಲಾಗಿದೆ. ಈ ಪೈಕಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 90 ರಿಂದ 100 ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ 60 ರಿಂದ 70 ಮಳಿಗೆ ನಿರ್ಮಿಸಲು ಯೋಜಿಸಲಾಗಿದೆ. ಶುಚಿಯ ಜತೆಗೆ ರುಚಿಯಾದ ಆಹಾರ ತಯಾರಿಸುವ ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ನಾನಾ ಬಗೆಯ ಆಹಾರ ತಯಾರಕರಿಂದ ಮಳಿಗೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಸೆ.12ರವರೆಗೆ ಕಾಲಾವಕಾಶವಿದೆ.

ಈ ಬಾರಿ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ ದಸರಾ ಆಹಾರ ಮೇಳ ಆಯೋಜಿಸಲು ಚಿಂತಿಸಲಾಗಿದೆ. ಬುಡಕಟ್ಟು ಶೈಲಿ ಸೇರಿದಂತೆ ಈ ಬಾರಿ ಮೇಳದಲ್ಲಿ ಸಹಜ ಕೃಷಿ ಆಹಾರಗಳು, ಮೈಸೂರು, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಉತ್ತರಭಾರತ, ಟಿಬೆಟಿಯನ್, ಕಾಶ್ಮೀರಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಶೈಲಿ, ಮರಾಠಿ ಜತೆಗೆ ವಿದೇಶಿ ಶೈಲಿಯ ಆಹಾರಗಳನ್ನು ಸವಿಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಸೆ.26 ರಿಂದ ಅ.3 ರವರೆಗೆ ಮೇಳ ನಡೆಯಲಿದೆ.ಕುಮುದಾ ಶರತ್, ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net