

ವಿಜಯಪುರ: ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ ಪಂಚಾಯಿತಿ ಹಾಗೂ ಬಬಲೇಶ್ವರಕ್ಕೆ ಜಿಪಂ ಸಿಇಒ ರಿಷಿ ಆನಂದ ಭೇಟಿ ನೀಡಿ ಶಾಲೆ, ಅಂಗನವಾಡಿ, ವಸತಿ ನಿಲಯ, ಆಸ್ಪತ್ರೆ, ಪಶು ಆಸ್ಪತ್ರೆ, ಅರಿವು ಕೇಂದ್ರ (ಗ್ರಾಮ ಗ್ರಂಥಾಲಯ) ಸೇರಿ ವಿವಿಧೆಡೆ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಸಾರವಾಡ ಗ್ರಾಪಂ ವ್ಯಾಪ್ತಿಯ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಸಂವಾದ ನಡೆಸಿದರು. ಸದ್ಯ ಕಲ್ಪಿಸಿದ ಕುಡಿಯುವ ನೀರು, ಬಿಸಿಯೂಟ ಸೇರಿ ಶಾಲೆಯಲ್ಲಿನ ಸೌಲಭ್ಯ ಹಾಗೂ ಮಕ್ಕಳ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ತಿಳಿಯದ ವಿಷಯಗಳಿಗೆ ಶಿಕ್ಷಕರಿಂದ ಪರಿಹಾರ ಪಡೆದುಕೊಳ್ಳಬೇಕು. ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆವರಣದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಇರುವಂತೆ ನೋಡಿಕೊಳ್ಳಬೇಕು. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ನೋಡಿಕೊಳ್ಳುವ ಜತೆಗೆ ಶಾಲೆಗೆ ಗೈರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮಕ್ಕಳ ಮತ್ತು ಪಾಲಕರಿಗೆ ತಿಳಿಹೇಳಿ, ನಿರಂತರವಾಗಿ ಶಾಲೆಗೆ ಬರುವುದನ್ನು ಖಚಿತಪಡಿಸಿಕೊಳ್ಳಬೇಕು. ಮಕ್ಕಳ ದೈಹಿಕ ವಿಕಸನದ ದೃಷ್ಟಿಯಿಂದ ಮಕ್ಕಳನ್ನು ಪಠ್ಯದ ಜೊತೆಗೆ ಆಟ, ಪರಿಸರ ಜ್ಞಾನ ಸೇರಿ ಇತರೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ನಂತರ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ದಾಖಲಾತಿಗಳನ್ನು ಸಮರ್ಪಕ ನಿರ್ವಹಣೆ ಮಾಡುವಂತೆ ಸೂಚಿಸಿದರು. ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ವಿವರ ದಾಖಲೆಯಲ್ಲಿ ನಿರ್ವಹಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಲು ಆಸ್ಪತ್ರೆಯ ಆವರಣದಲ್ಲಿ ತಿಂಗಳಲ್ಲಿ ಎರಡು ದಿನ ಶ್ರಮದಾನಕ್ಕಾಗಿ ಸೂಚಿಸಿದರು. ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳ ವೈದ್ಯರ ಸೇವೆ ಹಾಗೂ ಸಮಸ್ಯೆಗಳ ಕುರಿತು ಆಸ್ಪತ್ರೆಗೆ ಆಗಮಿಸಿದವರೊಂದಿಗೆ ಮಾಹಿತಿ ಪಡೆದರು.
ಬಳಿಕ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಎಲ್ಲ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕು. ದಾಸ್ತಾನು ಕೊಠಡಿ ಪರಿಶೀಲಿಸಿ, ಮಕ್ಕಳ ಪಾಲಕರಿಂದ ಅಂಗನವಾಡಿ ಕೇಂದ್ರದ ಕಾರ್ಯ ವೈಖರಿ ಕುರಿತು ಮಾಹಿತಿ ಪಡೆದುಕೊಂಡರು. ಗ್ರಾಮದ ಅರಿವು ಮತ್ತು ಮಾಹಿತಿ ಕೇಂದ್ರ (ಗ್ರಂಥಾಲಯ) ಕ್ಕೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿನ ಓದುಗರೊಂದಿಗೆ ಗ್ರಂಥಾಲಯದ ಸೌಲಭ್ಯಗಳ ಹಾಗೂ ಕಲ್ಪಿಸಬೇಕಾದ ಸೌಲಭ್ಯದ ಬಗ್ಗೆ ಮಾಹಿತಿ ಪಡೆದರು. ಲಭ್ಯವಿರುವ ಅನುದಾನ ಬಳಸಿಕೊಂಡು ಗ್ರಂಥಾಲಯದ ಮೇಲ್ಛಾವಣಿ ದುರಸ್ತಿಗೆ ಕ್ರಮ ವಹಿಸಲು ಸ್ಥಳದಲ್ಲಿದ್ದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ, ಮಕ್ಕಳು ಮತ್ತು ಶಾಲೆಯ ಶಿಕ್ಷಕರೊಡನೆ ಶಾಲೆಯಲ್ಲಿರುವ ಸೌಲಭ್ಯಗಳ ಕುರಿತು, ಕುಡಿಯುವ ನೀರು, ಶೌಚಾಗೃಹ, ಬಿಸಿಯೂಟ, ಆಟದ ವ್ಯವಸ್ಥೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ ಅವರಿಂದ ಮಾಹಿತಿ ಪಡೆದುಕೊಂಡರು.
ಬಬಲೇಶ್ವರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಸ್ಪತ್ರೆಯ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಮತ್ತು ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.
ಆಸ್ಪತ್ರೆಗೆ ಆಗಮಿಸುವ ರೋಗಿಗಳ ಮತ್ತು ಅವರ ಸಂಬಂಧಿಕರೊಡನೆ ಸಂಯಮದಿಂದ ವರ್ತಿಸಿ, ಅವರಿಗೆ ಪರಿಹಾರ ನೀಡಲು ಪ್ರಮಾಣಿಕ ಸೇವೆ ನೀಡಲು ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಹೇಳಿದರು. ಆವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಬಳಿಕ ಬಬಲೇಶ್ವರ ಪಟ್ಟಣದ ಪಶು ಆಸ್ಪತ್ರೆಗೆ ಭೇಟಿ ನೀಡಿ, ಕಾಲು ಬಾಯಿ ರೋಗ ಲಸಿಕಾ ಅಭಿಯಾನದ ಪ್ರಗತಿ ಕುರಿತು ಮಾಹಿತಿ ಪಡೆದು, ಈ ಅಭಿಯಾನ ಸೇರಿ ಇಲಾಖೆಯಿಂದ ಬರುವ ಎಲ್ಲ ಅಭಿಯಾನ ಮತ್ತು ಸೇವೆಗಳ ಕುರಿತು ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಪ್ರಚಾರ ಮಾಡಿ ನೂರರಷ್ಟು ಪ್ರಗತಿ ಸಾಧಿಸಲು ಸೂಚಿಸಿದರು.
ಬಬಲೇಶ್ವರ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಂದ ವಸತಿ ನಿಲಯದ ಕುರಿತು ಮಾಹಿತಿ ಪಡೆದರು. ವಸತಿ ನಿಲಯದಲ್ಲಿನ ಸೌಲಭ್ಯದ ಕುರಿತು ಮಾಹಿತಿ ಪಡೆದುಕೊಂಡು ಸಮಸ್ಯೆ ಆಲಿಸಿದರು. ಭದ್ರತೆಯ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸುವ ಕ್ರಮಕ್ಕಾಗಿ ವಸತಿನಿಲಯದಲ್ಲಿ ಮೇಲ್ವಿಚಾರಕರಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಸಂಪತಕುಮಾರ ಗುಣಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೀಪಕ, ಜಿಪಂ ಸಹಾಯಕ ಯೋಜನಾಧಿಕಾರಿಗಳಾದ ಅರುಣಕುಮಾರ ದಳವಾಯಿ, ಬಬಲೇಶ್ವರ ಇಒ ವಿ.ಎಸ್. ಹಿರೇಮಠ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ, ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಜೆ. ಇಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೊಳಮಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನೀಲ ಹಳ್ಳಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಕೆ. ಹೊಸಮನಿ ಮತ್ತಿತರರಿದ್ದರು.