

ಮಂಡ್ಯ: ಹಾವು ಮತ್ತು ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಅಗತ್ಯ ಔಷಧವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಇದರಿಂದ ಸಾರ್ವಜನಿಕರು ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ತಪ್ಪಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ತಾಲೂಕಿನ ಚಂದಗಾಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಯಲ್ಲಿ ಅಗತ್ಯ ಔಷಧವನ್ನು ದಾಸ್ತಾನು ಮಾಡಿಕೊಳ್ಳಿ. ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮನೆಗಳಿಗೆ ಖುದ್ದು ತೆರಳಿ ಡೆಂಘೆ, ಮಲೇರಿಯಾ ಜ್ವರಗಳ ಬಗ್ಗೆ ಅರಿವು ಮೂಡಿಸಬೇಕು. ಮಾತ್ರವಲ್ಲದೆ ಗರ್ಭಿಣಿಯರು ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವಂತೆ ಹಾಗೂ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಲಸಿಕೆಗಳನ್ನು ಹಾಕಿಸುವಂತೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಳೆಯದಾಗಿರುವುದರಿಂದ ಹೊಸ ಕಟ್ಟಡ ಮಂಜೂರಾಗಿರುತ್ತದೆ. ಪ್ರಸ್ತುತ ಆಸ್ಪತ್ರೆ ಇರುವ ಸ್ಥಳದ ಸಮಸ್ಯೆ ನ್ಯಾಯಾಲಯದಲ್ಲಿರುವುದರಿಂದ ಈಗಾಗಲೇ ಮತ್ತೊಂದು ನಿವೇಶನ ಮಂಜೂರಾಗಿರುತ್ತದೆ. ಆ ಸ್ಥಳದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಸಿಬ್ಬಂದಿ ಹಾಜರಾತಿ, ಔಷಧ ಸಂಗ್ರಹಣೆ, ಒಳ ಹಾಗೂ ಹೊರ ರೋಗಿಗಳಿಗೆ ಸಂಬಂಧಿಸಿದ ದಾಖಲಾತಿ, ಆಸ್ಪತ್ರೆಯ ಸ್ವಚ್ಛತೆ, ತ್ಯಾಜ್ಯಗಳ ನಿರ್ವಹಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹೇಮಂತ್‌ರಾಜ್, ಗ್ರಾಮ ಪಂಚಾಯಿತಿ ಪಿಡಿಒ ವಿದ್ಯಾ ಇತರರಿದ್ದರು.
ಶೌಚಗೃಹ ಅಶುಚಿತ್ವಕ್ಕೆ ಬೇಸರ
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿದ ಸಿಇಒ ಕೆ.ಆರ್.ನಂದಿನಿ, ಬಿಸಿಯೂಟ ಯೋಜನೆ, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಇತರೆ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಎರಡೂ ಶಾಲೆಗಳಲ್ಲಿನ ಶೌಚಗೃಹ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಶೌಚಗೃಹ ನಿರ್ಮಾಣ ಮಾಡಲು ಅನುಮೋದನೆಯಾಗಿದೆ. ಆದರೂ ಸಹ ಕಾಮಗಾರಿ ಏಕೆ ಪ್ರಾರಂಭಿಸಿಲ್ಲವೆಂದು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲದೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ದೂರವಾಣಿ ಕರೆ ಮಾಡಿ ತ್ವರಿತವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುವಂತೆ ಸೂಚಿಸಿದರು.
ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಗೈರು ಹಾಜರಾದ ಮಕ್ಕಳ ಬಗ್ಗೆ ಅವರ ಪಾಲಕರೊಂದಿಗೆ ಮಾತನಾಡಬೇಕು. ಈ ಮೂಲಕ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಕಳೆದ ಸಾಲಿಗಿಂತ ಉತ್ತಮ ಪ್ರಗತಿ ಸಾಧಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದ ಸಿಇಒ, ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಮೊಟ್ಟೆ ವಿತರಣೆ ಹಾಗೂ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಪ್ರಾಥಮಿಕ ಶಾಲೆಯನ್ನು ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಶಾಲೆಗೆ ಅಕ್ಕಪಕ್ಕದ ಗ್ರಾಮಗಳಾದ ಪುಟ್ಟಿಕೊಪ್ಪಲು, ಬಿಳಿಗುಲಿ, ಉಪ್ಪಾರಕೊಪ್ಪಲು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಶಾಲೆ ಆರಂಭವಾಗುವ ಮತ್ತು ಮುಕ್ತಾಯ ಸಮಯಕ್ಕಿಂತ ವಿಳಂಬವಾಗಿ ಬಸ್ ಬರುತ್ತಿದೆ. ಇದರಿಂದ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಆಗುತ್ತಿಲ್ಲ. ಶಾಲೆ ಬಿಟ್ಟ ನಂತರ ಒಂದು ಗಂಟೆ ಕಾಯುವ ಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಸಮಸ್ಯೆ ಸರಿಪಡಿಸಲು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಮುಖ್ಯಶಿಕ್ಷಕಿ ಜಯಶೀಲಾ ಇತರರಿದ್ದರು.
ಬಳಿಕ ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಬಾಲ್ಯವಿವಾಹ ತಡೆಗಟ್ಟುವ ಸಲುವಾಗಿ ತೆರೆಯಲಾಗಿರುವ 1098 ಸಹಾಯವಾಣಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತೆ ಹಾಗೂ ಮಕ್ಕಳಿಗೆ ಆತ್ಮ ವಿಶ್ವಾಸ ಹೆಚ್ಚಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಿದರು.