

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ರೋಗಗಳನ್ನು ಗುಣಪಡಿಸುವ ಕೇಂದ್ರಗಳಲ್ಲಿ ಆರೋಗ್ಯಕರ ವಾತಾವರಣ ಇರಬೇಕು ರೋಗಿಗಳಿಗೆ ಸಕಾಲದಲ್ಲಿ ವೈದ್ಯಕೀಯ ಸೌಲಭ್ಯ ಸಿಗಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಸೂಚನೆ ನೀಡಿದರು.
ದೇವನಹಳ್ಳಿ ತಾಲೂಕು ವಿಜಯಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಅಗತ್ಯವಿರುವ ಔಷಧಿಗಳನ್ನು ದಾಸ್ತಾನು ಮಾಡಿಕೊಂಡಿರಬೇಕು ಅನಗತ್ಯವಾಗಿ ಔಷಧಿಗಳನ್ನು ಹೊರಗೆ ಖರೀದಿಸುವಂತೆ ರೋಗಿಗಳಿಗೆ ಸೂಚನೆ ನೀಡಬಾರದು ಇಂಥ ದೂರುಗಳು ಕೇಳಿಬಂದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕುಡಿಯಲು ಶುದ್ಧ ನೀರು ದೊರಕುವ ವ್ಯವಸ್ಥೆ ಬಗ್ಗೆ ನಿಗಾ ವಹಿಸಬೇಕು, ಶೌಚಗೃಹಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ರೋಗಿಗಳಿಂದ ಮಾಹಿತಿ: ಆಸ್ಪತ್ರೆಯ ವಾರ್ಡ್‌ಗಳನ್ನು ಭೇಟಿ ಮಾಡಿ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದ ಜಿಪಂ ಸಿಇಒ ದಾಖಲಾಗಿದ್ದ ರೋಗಿಗಳನ್ನು ಮಾತನಾಡಿಸಿ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳು ಯಾವ ರೀತಿಯಾಗಿ ಸಿಗುತ್ತಿದೆ ಎಂದು ಮಾಹಿತಿ ಪಡೆದುಕೊಂಡರು ಜತೆಗೆ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಅವರಿಗೆ ಔಷಧಿಗಳು ಸರಿಯಾದ ರೀತಿ ಸಕಲಾಕ್ಕೆ ಸಿಗುತ್ತಿವೇಯೇ ಎಂಬುದನ್ನು ಪರಿಶೀಲಿಸಿದರು. ರೋಗಿಗಳಿಗೆ ಯಾವುದೇ ರೀತಿ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಗುಣಮಟ್ಟದ ಔಷಧಿ ಸಿಗಬೇಕು:
ಚಿಕಿತ್ಸಾ ಕೊಠಡಿಗೆ ಭೇಟಿ ನೀಡಿ ವೈದ್ಯಕೀಯ ಉಪಕರಣಗಳ ಬಳಕೆಯಲ್ಲಿರುವ ಪರೀಕರಗಳ ಮಾಹಿತಿ ಪಡೆದು ಸಿಇಒ ಸಲಹೆ ಸೂಚನೆಯನ್ನು ನೀಡಿದರು. ಔಷಧಿ ವಿತರಣೆ ಕೊಠಡಿಗೆ ಭೇಟಿ ನೀಡಿ ದಾಸ್ತಾನು ಹಾಗೂ ಔಷಧಿ ಲಭ್ಯತೆ ಕುರಿತು ಪರಿಶೀಲನೆ ನಡೆಸಿ ಗುಣಮಟ್ಟದ ಔಷಧಿಗಳು ದೊರೆಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.