

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಹಿಳೆಯರು ಕುಟುಂಬ ನಿರ್ವಹಣೆ ಜತೆಗೆ ಸ್ವ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸಬಲರಾಗುತ್ತ ಹೆಜ್ಜೆ ಇಡಬೇಕು ಎಂದು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಸಲಹೆ ನೀಡಿದರು.
ದೇವನಹಳ್ಳಿ ತಾಲೂಕು ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ಮತ್ತು ಕೌಶಲ ಉದ್ಯಮ ಶೀಲತಾ ಸಂಸ್ಥೆ ಸಹಯೋಗದೊಂದಿಗೆ ದೇವನಹಳ್ಳಿಯ ಐಟಿಐ ಕಾಲೇಜಿನಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿರುವ ನಲ್ ಜಲ್ ಮಿತ್ರ ಕೌಶಲ ತರಬೇತಿ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರೂ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಈ ಹಿಂದೆ ಮನೆಯ ನಾಲ್ಕು ಗೋಡೆಗಳಿಗಷ್ಟೇ ಮಹಿಳೆಯರು ಸೀಮಿತ ಎಂಬ ಭಾವನೆ ಇತ್ತು. ಪ್ರಸ್ತುತ ಚಿತ್ರಣ ಬದಲಾಗಿದೆ ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಬಗೆಯ ಕೌಶಲ ತರಬೇತಿಗಳು ಸಹಕಾರ ನೀಡುತ್ತಿವೆ ಇವುಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗಳಲ್ಲಿ ಮಹಿಳೆಯರು ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಲ್ ಜಲ್ ಮಿತ್ರಗಳಿಗೆ ತಾಂತ್ರಿಕ ಕೌಶಲ ತರಬೇತಿದಲ್ಲಿ ಮಹಿಳೆಯರು ತಳ ಹಂತದಿಂದ ಉದ್ಯೋಗ ಪ್ರಾರಂಭಿಸುವ ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇದೇ ವೇಳೆ ಶಿಬಿರಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲಿನ ತರಬೇತಿ ಹಾಗೂ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.