

ವಿಜಯಪುರ: ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಶುಕ್ರವಾರ ವಿಜಯಪುರ ತಾಲೂಕಿನ ಜುಮನಾಳ, ಹಿಟ್ಟಿನಹಳ್ಳಿ ಮತ್ತು ಐನಾಪುರ ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಹಿಟ್ಟಿನಹಳ್ಳಿ ಹಾಗೂ ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿನಿತ್ಯ ತಪ್ಪದೇ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಕ್ಕಳ ಆಕರ್ಷಣೆಗೆ ಬಾಲ್ ಪೇಂಟಿಂಗ್ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ದುರಸ್ತಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂದರು.
ಅಂಗನವಾಡಿಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಮೂಲ ಸೌಕರ್ಯ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದನ್ನು ಸಂಬಂಧಿಸಿದವರು ನಿಗಾವಹಿಸಬೇಕು. ಅಂಗನವಾಡಿ ಕೇಂದ್ರಗಳ ಒಳಾಂಗಣ ಮತ್ತು ಹೊರಾಂಗಣ ಆವರಣದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಸ್ತು ಮೂಡಲು ಸ್ವಚ್ಛತೆ ಹಾಗೂ ಶುಚಿತ್ವದ ಮಹತ್ವ ಅಗತ್ಯವಾಗಿದ್ದು, ಅಂಗನವಾಡಿಗಳ ಸ್ವಚ್ಛತೆ ಆದ್ಯತೆಯಾಗಿಸಿಕೊಳ್ಳಬೇಕು ಎಂದರು.
ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಗ್ರಂಥಾಲಯದಲ್ಲಿ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಿ, ಗ್ರಂಥಾಲಯ ಮಕ್ಕಳ ಸ್ನೇಹಿಯಾದ ವಾತಾವರಣ ಇರುವಂತೆ ಗಮನ ಹರಿಸುವಂತೆ ಸೂಚಿಸಿದರು.
ಜುಮನಾಳ, ಹಿಟ್ಟಿನಹಳ್ಳಿ ಮತ್ತು ಐನಾಪುರ ಗ್ರಾಮ ಪಂಚಾಯಿತಿಗಳ ಎಲ್ಲ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲನೆ ನಡೆಸಿ, ಸಿಬ್ಬಂದಿ ಕಡ್ಡಾಯವಾಗಿ ಇ-ಹಾಜರಾತಿ ಸಲ್ಲಿಸಬೇಕು ಎಂದರು.
ಐನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.
ಹಿಟ್ಟಿನಹಳ್ಳಿ ಗ್ರಾಪಂ ಕಾರ್ಯದರ್ಶಿ ಓಂಪ್ರಕಾಶ ಬಂಡಿ, ಜುಮನಾಳ ಗ್ರಾಪಂ ಕಾರ್ಯದರ್ಶಿ ಎಸ್.ಕೆ. ಹೊನಕಟ್ಟಿ, ಎಸ್‌ಡಿಎ ಕಸ್ತೂರಿ ಲಮಾಣಿ, ಐನಾಪುರ ಗ್ರಾಪಂ ಕಾರ್ಯದರ್ಶಿ ರಾಜೇಶ ಟಿ ಮತ್ತಿತರರಿದ್ದರು.