ನಿಡೋಣಿ ಗ್ರಾಪಂಗೆ ಸಿಇಒ ರಿಷಿ ಆನಂದ ಭೇಟಿ, ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

zp ceo visit nidoni
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯಿತಿಗೆ ಸಿಇಒ ರಿಷಿ ಆನಂದ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಇಒ ಜೆ.ಎಸ್. ಪಠಾಣ, ಸಹಾಯಕ ನಿರ್ದೇಶಕ ವಿ.ಎಸ್. ಹಿರೇಮಠ, ವೈದ್ಯಾಧಿಕಾರಿ ಡಾ. ಶೀತಲ ಕಿನಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿದ ಸಿಇಒ ರಿಷಿ ಆನಂದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರಲ್ಲದೇ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣವಾದ ಎನ್‌ಆರ್‌ಎಲ್‌ಎಂ ಸಂಜೀವಿನಿ ಶೆಡ್ ಕಟ್ಟಡ ಹಾಗೂ ನೂತನ ಗ್ರಾಮ ಪಂಚಾಯಿತಿ ಕಟ್ಟಡ, ಗ್ರಂಥಾಲಯ ಕಟ್ಟಡಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಂಥಾಲಯ ಪೂರ್ಣಗೊಂಡ ತಕ್ಷಣವೇ ಎಲ್ಲ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಬೇಕು ಎಂದರು.

ಗ್ರಂಥಾಲಯಗಳಲ್ಲಿ ಬರುವ ವಿದ್ಯಾರ್ಥಿಗಳು ಹಾಗೂ ಓದುಗರಿಗೆ ಅನುಕೂಲವಾಗುವಂತೆ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುವ ಪುಸ್ತಕಗಳನ್ನು ಖರೀದಿಸಿ ಇರಿಸಬೇಕು. ಗ್ರಂಥಾಲಯಕ್ಕೆ ಗುಣಮಟ್ಟದ ಮತ್ತು ಆಕರ್ಷಕ ಪೇಂಟಿಂಗ್ ಮಾಡಿಸಬೇಕು ಮತ್ತು ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಗ್ರಾಮದ ಮುಖ್ಯ ರಸ್ತೆಗೆ ಗ್ರಂಥಾಲಯದ ನಾಮಫಲಕವನ್ನು ಅಳವಡಿಸಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ಅಂಗನವಾಡಿ ಮಕ್ಕಳಿಗೆ ಬೆಂಚ್ ವಿತರಣೆ

ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುರ್ಚಿ ಮತ್ತು ಬೆಂಚ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಸಂವಾದ ನಡೆಸಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ವಿತರಣೆ, ಆಟ, ಪಾಠ ಯೋಗಕ್ಷೇಮ ಕುರಿತು ವಿಚಾರಿಸಿದರು.

ಮಕ್ಕಳಿಗೆ ವಿತರಣೆ ಮಾಡಿದ ಪೀಠೋಪಕರಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಂಗನವಾಡಿ ಕೇಂದ್ರದ ಸುತ್ತ - ಮುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡಿಕೊಳ್ಳಬೇಕು. ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ, ರೋಗ - ರುಜಿನುಗಳು ಬರದ ಹಾಗೆ ಅಂಗನವಾಡಿಗಳ ಸುತ್ತ ಮುತ್ತ ಸ್ವಚ್ಚತೆ ಕಾಯ್ದುಕೊಂಡಲ್ಲಿ ಎಲ್ಲ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಮಕ್ಕಳ ಕಲಿಕಾ ಸಾಮರ್ಥ್ಯ ಗುಣಮಟ್ಟ ಹೆಚ್ಛಳವಾಗುವಂತೆ ಕಲಿಕೆಗೆ ಆದ್ಯತೆ ನೀಡಬೇಕು. ಅಡುಗೆ ಕೊಠಡಿಯಲ್ಲಿ ಪ್ರತಿನಿತ್ಯ ಶುಚಿತ್ವ ಕಾಪಾಡಬೇಕು. ಕಡ್ಡಾಯವಾಗಿ ಪ್ರತಿದಿನ ಸಿಬ್ಬಂದಿ ಹಾಗೂ ಮಕ್ಕಳ ಹಾಜರಾತಿ ನಿರ್ವಹಣೆ ಮಾಡಬೇಕು. ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹಾಗೂ ಶೌಚಗೃಹ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಮಕ್ಕಳಿಗೆ ಸಮಯಾನುಸಾರ ಪೌಷ್ಟಿಕ ಆಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಧಿಕಾರಿಗಳೊಂದಿಗೆ ಸಭೆ

ತಾಲೂಕು ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಮಾಹಿತಿ, ಸರ್ಕಾರಿ ಶಾಲೆಗಳು, ಕುಡಿಯುವ ನೀರಿನ ಮೂಲಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಕುರಿತು ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದ ಸಿಇಒರವರು ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ತುರ್ತಾಗಿ ದುರಸ್ತಿ ಮಾಡಿಸಬೇಕು ಎಂದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉದ್ಯಾನವನ ಅನುಷ್ಟಾನ ಮಾಡಬೇಕು. ಗ್ರಾಮಗಳಲ್ಲಿ ನಿರಂತರ ಸ್ವಚ್ಛತೆಯನ್ನು ಕಾಪಾಡಬೇಕು. ನಿಯಮಿತವಾಗಿ ಫಾಗಿಂಗ್, ಬ್ಲೀಚಿಂಗ್ ಕಾರ್ಯಗಳನ್ನು ಕೈಗೊಳ್ಳಬೇಕು. ಈ ಮೂಲಕ ಸಾಂಕ್ರಾಮಿಕ ರೋಗಗಳಿಂದ ಮಕ್ಕಳು. ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರನ್ನು ರಕ್ಷಿಸಬಹುದು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಹೇಳಿದರು.

ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ

ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ಕೊಡುವ ರೋಗಿಗಳ ವಿವರಗಳ ಕುರಿತು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು. ಆಸ್ಪತ್ರೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಮತ್ತು ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಆಸ್ಪತ್ರೆಯ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿ, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಹಾಜರಾತಿಯನ್ನು ಪ್ರತಿನಿತ್ಯ ಕಡ್ಡಾಯವಾಗಿ ಪರಿಶೀಲಿಸಬೇಕು. ಅನಾರೋಗ್ಯದಿಂದ ಬರುವ ರೋಗಿಗಳ ಮತ್ತು ರೋಗಿಗಳ ಸಂಬಂಧಿಕರೊಡನೆ ಸಂಯಮದಿಂದ ವರ್ತಿಸಿ, ಅವರಿಗೆ ಪರಿಹಾರ ನೀಡಬೇಕು. ಆಸ್ಪತ್ರೆಯ ಸುತ್ತ-ಮುತ್ತಲೂ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು ಮತ್ತು ಆಸ್ಪತ್ರೆಯ ಒಳಾಂಗಣ ಆವರಣವನ್ನೂ ಸಹ ಪ್ರತಿನಿತ್ಯ ಸ್ವಚ್ಛಗೊಳಿಸಬೇಕು ಎಂದರು.

ನಂತರ, 15 ನೇ ಹಣಕಾಸಿನ ಯೋಜನೆ ಅಡಿ ಮತ್ತು ಗ್ರಾಪಂ ಅನುದಾನದಿಂದ ನೂತನವಾಗಿ ನಿರ್ಮಿಸಲಾಗಿರುವ ಜ್ಞಾನ ಮತ್ತು ಯೋಗ ಮಂದಿರ ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.

ಇಒ ಜೆ.ಎಸ್. ಪಠಾಣ, ಸಹಾಯಕ ನಿರ್ದೇಶಕ ವಿ.ಎಸ್. ಹಿರೇಮಠ, ವೈದ್ಯಾಧಿಕಾರಿ ಡಾ. ಶೀತಲ ಕಿನಗಿ, ತಾಲೂಕು ಯೋಜಾನಾಧಿಕಾರಿ ಎಸ್.ಬಿ. ಪಾಟೀಲ, ಪಿಡಿಒ ಬಿ.ಎಚ್. ಮುಜಾವರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎಸ್. ಮ್ಯಾಗೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net