ಪ್ರವಾಹ ಹಿನ್ನೆಲೆ ಮುನ್ನಚ್ಚರಿಕೆ ಕ್ರಮ ವಹಿಸಿ; ಸ್ಥಳೀಯ ಅಧಿಕಾರಿಗಳಿಗೆ ಸಿಇಒ ರಿಷಿ ಆನಂದ ಸೂಚನೆ

ceo rishi anand visit tikota babaleshwara rural area
ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಗ್ರಾಮೀಣ ಪ್ರದೇಶಕ್ಕೆ ಸಿಇಒ ರಿಷಿ ಆನಂದ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅಧಿಕಾರಿಗಳಾದ ಜೆ.ಎಸ್. ಪಠಾಣ್, ಶಿವನಗೌಡ ಪಾಟೀಲ, ಬಸವಂತ್ರಾಯಗೌಡ ಬಿರಾದಾರ, ರವಿ ಪವಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಮಳೆ ಜೋರಾಗುತ್ತಿದ್ದು ಸಂಭವನೀಯ ಪ್ರವಾಹ ತಡೆಗೆ ಈಗಿನಿಂದಲೇ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸಿಇಒ ರಿಷಿ ಆನಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಿಕೋಟಾ ಮತ್ತು ಬಬಲೇಶ್ವರ ತಾಲೂಕು ಕೇಂದ್ರ ಹಾಗೂ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಪರಿಶೀಲನೆ ನಡೆಸಿದರಲ್ಲದೇ ಸಂಭವನೀಯ ಪ್ರವಾಹದ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಿಕೋಟಾ ಪಟ್ಟಣದ ಕೆಜಿಎಸ್ ಶಾಲೆಗೆ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡದೇ ಪರ್ಯಾಯ ವ್ಯವಸ್ಥೆ ಮಾಡಲು ಹೇಳಿದರು. ಮಳೆ ಬಂದ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನೀರು ನೀಲ್ಲದಂತೆ ಅಗತ್ಯ ಕ್ರಮ ವಹಿಸಬೇಕು. ಮುಂಜಾಗೃತೆ ವಹಿಸಬೇಕು. ದುರಸ್ಥಿಗೊಳಿಸುವುದು ಅವಶ್ಯಕವಿದ್ದಲ್ಲಿ ಕ್ರೀಯಾಯೋಜನೆ ತಯಾರಿಸಿ, ಇಲಾಖೆಯ ಮೇಲಾಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿದರು.

ಅಂಗನವಾಡಿ ಕೇಂದ್ರಗಳ ಕಟ್ಟಡಗಳಲ್ಲಿ ಮಳೆ ಬಂದ ಸಮಯದಲ್ಲಿ ಯಾವುದೇ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಕಟ್ಟಡಗಳ ದುರಸ್ತಿ ಕಾರ್ಯ ಬಾಕಿಯಿದ್ದಲ್ಲಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.

ತಿಕೋಟಾ ಪಟ್ಟಣದಿಂದ ತಾಜಪುರ ಎಚ್ ಗ್ರಾಮ ಪಂಚಾಯಿತಿಗೆ ಹೋಗುವ ರಸ್ತೆಯ ಮಧ್ಯದಲ್ಲಿ ಇರುವ ಹಳ್ಳಕ್ಕೆ ಭೇಟಿ ನೀಡಿದ ಸಿಇಒ ಅವರು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ನಂತರ ಕೋಟ್ಯಾಳ ಗ್ರಾಪಂ ವ್ಯಾಪ್ತಿಯ ಹರನಾಳ ಗ್ರಾಮದ ಡೋಣಿ ನದಿ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ಹಾನಿ ಕುರಿತು ಸಮಗ್ರ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ಒದಗಿಸಲು ಆದ್ಯತೆಯ ಮೇರೆಗೆ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಅಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದರು.

ಕೋಟ್ಯಾಳ ಗ್ರಾಮದ ಸೇತುವೆ ಪರಿಶೀಲಿಸಿ ಬಳಿಕ ಹೊನವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ನಂತರ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಶ್ಯಾಳ, ಸಾರವಾಡ ಹಾಗೂ ದದಾಮಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಬಲೇಶ್ವರ ಇಒ ಜೆ.ಎಸ್. ಪಠಾಣ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತಿಕೋಟಾ ಇಒ ಬಸವಂತ್ರಾಯಗೌಡ ಬಿರಾದಾರ, ಅಭಿಯಂತರ ರವಿ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎಸ್. ಮ್ಯಾಗೇರಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ, ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ಬಸವರಾಜ ಸಂಕಗೊಂಡ, ಸೆಕ್ಷನ್ ಇಂಜಿನಿಯರ್ ಪ್ರಶಾಂತ ಹೆಬ್ಬಾರೆ, ಅಧಿಕಾರಿಗಳಾದ ಅನ್ವರ್ ನದಾಫ್, ಶೋಭಾ ಶೀಳಿನ, ಉಮೇಶ ಕನಮಡಿ, ಸಂತೋಷಕುಮಾರ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net