

ಮೈಸೂರು: ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ಗೃಹಪ್ರವೇಶದ ಕಾರ್ಯಕ್ರಮದ ವೇಳೆ ಊಟ ಸೇವಿಸಿ ಗ್ರಾಮದ 39 ಜನ ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾ ಪಂಚಾಯತಿ ಸಿಇಒ ಕೆ.ಎಂ.ಗಾಯಿತ್ರಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮಾರ್ಬಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ ಅವರು, ಕಲುಷಿತ ಆಹಾರ ಸೇವನೆಯಿಂದಾಗ ವಾಂತಿಭೇದಿ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಗ್ರಾಮ ಪಂಚಾಯಿತಿ ಜೊತೆಗೆ ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಗ್ರಾಮದಲ್ಲಿ ಜರುಗುವ ಯಾವುದೇ ಕಾರ್ಯಕ್ರಮಗಳಲ್ಲಿ ಪರಿಶುದ್ದವಾಗಿ ಆಹಾರ ಸಿದ್ದಪಡಿಸಲು ಗಮನಹರಿಸಬೇಕು. ಶುದ್ಧ ನೀರನ್ನು ಬಳಸುವ ಮೂಲಕ ಆಹಾರ ತಯಾರಿಸಬೇಕು. ಶುಚಿತ್ವ ಕಾಯ್ದುಕೊಳ್ಳುವ ಬಗ್ಗೆ ಯಾರೂ ನಿರ್ಲಕ್ಷೃ ಮಾಡಬಾರದು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಜೊತೆಗೆ ಮಳೆಗಾಲದಲ್ಲಿ ಜನರು ಚನ್ನಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಬಿಸಿ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ತಾತ್ಕಾಲಿಕ ಚಿಕಿತ್ಸಾಲಯಕ್ಕೆ ಭೇಡಿ ನೀಡಿದ ಅವರು, ರೋಗ ಲಕ್ಷಣಗಳು ಕಂಡುಬರುವ ಮಂದಿಗೆ ಗುಣಮಟ್ಟದ ತಪಾಸಣೆ ನಡೆಸಿ, ನಿಖರವಾದ ಮಾಹಿತಿಯೊಂದಿಗೆ ದಾಖಲು ಮಾಡಿಕೊಳ್ಳಬೇಕು. ಉತ್ತಮ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡಬೇಕು. ಒಂದು ವೇಳೆ ಸ್ಥಿತಿ ಗಂಬೀರ ಎಂದು ಕಂಡುಬಂದಲ್ಲಿ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಅವರು ಮಾತನಾಡಿ, ಗ್ರಾಮದಲ್ಲಿ ಮೃತರಾದ ಮಹಿಳೆಯೊಬ್ಬರು ಕಿಡ್ನಿ ವೈಫಲ್ಯ, ಅಧಿಕ ರಕ್ತದೊತ್ತಡ, ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಕಾಲರ ರೋಗ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಪ್ರದೀಪ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ನಾಯಕ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಂಜಿತ್, ಪಿಡಿಒ ಕುಮಾರಸ್ವಾಮಿ ಇದ್ದರು.