

ಕಾರವಾರ: ಲೋಕಸಭಾ ಚುನಾವಣೆ ಮತದಾನ ಜಾಗೃತಿಯ ಅಂಗವಾಗಿ ನಗರದ ಮಾಲಾದೇವಿ ಮೈದಾನದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲಾ ಪಂಚಾಯಿತಿಯ ಸ್ವೀಪ್ ಸೂಪರ್ ಸ್ಟಾರ್ ತಂಡ ಜಯಗಳಿಸಿತು.
ಪೊಲೀಸ್ ಇಲಾಖೆಯ ಸಿ-ವಿಜಿಲ್ ಕಾಪ್ಸ್ ಹಾಗೂ ಜಿಪಂನ ಸ್ವೀಪ್ ಸೂಪರ್ ಸ್ಟಾರ್ ತಂಡಗಳ ನಡುವೆ 12 ಓವರ್‌ಗಳ ಅಂತಿಮ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಪಂ ಸಿಇಒ ಈಶ್ವರ ಕಾಂದೂ ನೇತೃತ್ವದ ಸ್ವೀಪ್ ಸೂಪರ್ ಸ್ಟಾರ್ ತಂಡವು 141 ಓವರ್ ಗಳಿಸಿತು. ಎಸ್‌ಪಿ ಎನ್.ವಿಷ್ಣುವರ್ಧನ ನೇತೃತ್ವದ ತಂಡವು 83 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು. ಮೀಡಿಯಾ ವಾರಿಯರ್ಸ್ ಹಾಗೂ ಜಿಪಂ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು.
ಈಶ್ವರ ಕಾಂದೂ ಅವರು ಉತ್ತಮ ಬ್ಯಾಟಿಂಗ್, ಬೌಲಿಂಗ್ ಹಾಗೂ ವಿಕೆಟ್ ಕೀಪಿಂಗ್ ಮಾಡಿ ಗಮನ ಸೆಳೆದರು. ಪಂದ್ಯ ಉದ್ಘಾಟಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಸ್ವತಃ ಬ್ಯಾಟಿಂಗ್ ಮಾಡಿ ಅಚ್ಚರಿ ಮೂಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು, ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಉಪ ವಿಭಾಗಾಧಿಕಾರಿ ಕನಿಷ್ಕ, ಎಎಸ್‌ಪಿ ಸಿ.ಟಿ. ಜಯಕುಮಾರ್, ತಾಪಂ ಇಒ ಕೆ.ಸತೀಶ್ ಹಾಗೂ ಇತರ ಎಲ್ಲ ಅಧಿಕಾರಿಗಳು ಇದ್ದರು.