ನರೇಗಾ ಕಾಮಗಾರಿ ಪರಿಶೀಲಿಸಿದ ಸಿಇಒ

17 LXR 2
Published on

ಲಕ್ಷ್ಮೇಶ್ವರ: ತಾಲೂಕಿನ ರಾಮಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ನಿರ್ಮಾಣವಾಗಿರುವ ಚರಂಡಿ, ಸಿಸಿ ರಸ್ತೆಗಳನ್ನು ಜಿಪಂ ಸಿಇಒ ಭರತ್ ಎಸ್. ಮಂಗಳವಾರ ಪರಿಶೀಲಿಸಿದರು. ನಂತರ ಸಮೀಪದ ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿ, ಮಕ್ಕಳ ದಾಖಲಾತಿ, ಬೋಧನಾ ಗುಣಮಟ್ಟ, ಸಿಬ್ಬಂದಿ ಹಾಜರಾತಿ, ವಾರ್ಷಿಕ ಪರೀಕ್ಷೆಯ ಶೈಕ್ಷಣಿಕ ಪ್ರಗತಿ, ಶಾಲಾ ಶೌಚಗೃಹ, ಅಡಿಗೆ ಕೋಣೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಬಿಸಿಯೂಟದ ಮೆನು, ಆಹಾರ ಧಾನ್ಯಗಳ ಗುಣಮಟ್ಟ ಪರೀಕ್ಷಿಸಿದರು. ಉತ್ತಮವಾಗಿ, ರುಚಿಯಾಗಿ ಅಡುಗೆ ಮಾಡಿ ಮಕ್ಕಳಿಗೆ ನೀಡಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

ಅಕ್ಷರ ದಾಸೋಹಕ್ಕೆ ಬಳಸುವ ತರಕಾರಿ, ಸೊಪ್ಪು, ಮಕ್ಕಳಿಗೆ ವಿತರಿಸುವ ಮೊಟ್ಟೆ, ಬಾಳೆ ಹಣ್ಣಿನ ಬಗ್ಗೆ ಮಾಹಿತಿ ಪಡೆದರು. ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿ ನೆಡುವುದರ ಮೂಲಕ ಪರಿಸರದ ಜಾಗೃತಿ ಮೂಡಿಸಿದರು.

ವರ್ಗ ಕೋಣೆಗಳಿಗೆ ತೆರಳಿದ ಸಿಇಒ, ವಿದ್ಯಾರ್ಥಿಗಳೊಂದಿಗೆ ವಿಜ್ಞಾನದ ವಿಷಯದ ಸಂವಾದವನ್ನು ಮಾಡಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಹೆಚ್ಚು ಅಂಕಗಳನ್ನು ಗಳಿಸಬೇಕು. ತಂದೆ-ತಾಯಿ, ಕಲಿತ ಶಾಲೆಗೆ ಕೀರ್ತಿ ತರುವಂತೆ ಕಿವಿಮಾತು ಹೇಳಿದರು. ನಂತರ ಪಟ್ಟಣಕ್ಕೆ ಆಗಮಿಸಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಆಹಾರದ ಗುಣಮಟ್ಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ನಾನ ಗೃಹ, ಶೌಚಗೃಹಗಳ ಸ್ವಚ್ಛತೆಯನ್ನು ವೀಕ್ಷಿಸಿದರು.

ತಾಪಂ ಇಒ ಕೃಷ್ಣಪ್ಪ ಧರ್ಮರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗದೀಶ ಕುರುಬರ, ತಾಂತ್ರಿಕ ಸಂಯೋಜಕ ಹರೀಶ ಸೊಬರದ, ತಾಲೂಕು ಐಇಸಿ ಸಂಯೋಜಕ ಮಂಜುನಾಥಸ್ವಾಮಿ ಎಚ್.ಎಂ, ತಾಂತ್ರಿಕ ಸಹಾಯಕ ಶ್ರೀನಿವಾಸ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net