

ಮಂಡ್ಯ: ಇತ್ತೀಚೆಗೆ ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು. ಮಾತ್ರವಲ್ಲದೆ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಳವಳ್ಳಿ ತಾಲೂಕಿನ ವಿವಿಧೆಡೆ ಜಲ ಜೀವನ್ ಮಿಷನ್ ಕಾಮಗಾರಿಗೆ ಪರಿಶೀಲನೆ ನಡೆಸಿದಾಗ ನ್ಯೂನ್ಯೂತೆ ಅನಾವರಣಗೊಂಡಿವೆ.
ಸುಜ್ಜಲೂರು, ಚನ್ನಪಿಳ್ಳೆಕೊಪ್ಪಲು, ವಡಕೆಪುರ, ಹಂಗ್ರಾಪುರ ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಸಿಇಒ, ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿದೆ. ಕೆಲ ಮನೆಗಳ ಹತ್ತಿರ ನಳಗಳಲ್ಲಿ ನೀರು ಸೋರುತ್ತಿದೆ, ಕೆಲವು ವಾಲ್ವ್ಗಳು ಕಾರ್ಯನಿರ್ವಹಿಸುತ್ತಿಲ್ಲ, ಕೆಲವು ಬೀದಿಗಳಲ್ಲಿ ನಳ ಸಂಪರ್ಕ ಕಲ್ಪಿಸಲಾಗಿದ್ದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಈ ಎಲ್ಲ ನ್ಯೂನ್ಯತೆಗಳನ್ನು ತುರ್ತಾಗಿ ಸರಿಪಡಿಸಿ ಸಾರ್ವಜನಿಕರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಇಂಜಿನಿಯರ್‌ಗೆ ಸೂಚಿಸಿದರು.
ಸ್ಥಳದಲ್ಲಿ ಹಾಜರಿದ್ದ ಗ್ರಾ.ಪಂ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಜಲ ಜೀವನ ಮಿಷನ್ ಯೋಜನೆಯ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ದೂರುಗಳ ಬಗ್ಗೆ ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಂಜಿನಿಯರ್‌ಗೆ ತಿಳಿಸಿದರು.
ಚನ್ನಪಿಳ್ಳೆಕೊಪ್ಪಲು ಗ್ರಾಮದ ಪಶು ಆಸ್ಪತ್ರಗೆ ಅನಿರೀಕ್ಷಿತ ಭೇಟಿ ನೀಡಿ ಔಷಧಗಳ ಸಂಗ್ರಹ, ಆಸ್ಪತ್ರೆಯ ಮೂಲ ಸೌಲಭ್ಯ ಹಾಗೂ ಲಸಿಕಾಕರಣದ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ಕಟ್ಟಡ ಶಿಥಿಲವಾಗಿದ್ದು, ಈ ಬಗ್ಗೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಆಸ್ಪತ್ರೆ ವ್ಯಾಪ್ತಿಯಲ್ಲಿ 6 ಗ್ರಾಮಗಳಿದ್ದು, ಅಂದಾಜು 3 ಸಾವಿರ ಮೇಕೆ ಮತ್ತು ಕುರಿಗಳಿವೆ. ಔಷಧಗಳ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ನಂತರ ಮಿನಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡಲಾಗುವ ಪೌಷ್ಠಿಕ ಆಹಾರದ ವಿವರಣೆ ಪಡೆದರು. ಜತೆಗೆ ನಿರ್ವಹಿಸಲಾಗಿರುವ ವಹಿಗಳನ್ನು ಪರಿಶೀಲಿಸಿದರು.