ಅಸ್ವಸ್ತರಾಗಿದ್ದ 119 ಪೈಕಿ 40 ಮಕ್ಕಳು ಗುಣಮುಖ: ರಾಹುಲ ಶಿಂಧೆ ಹೇಳಿಕೆ

IMG-20250913-WA0014.jpg
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿ ಹೋಟ್ಟೆನೋವು, ವಾಂತಿಯಿಂದ ಅಸ್ವಸ್ತರಾಗಿದ್ದ 119 ಮಕ್ಕಳ ಪೈಕಿ 40 ಮಕ್ಕಳು ಗುಣಮುಖರಾಗಿ ಡಿಚಾರ್ಜ್ ಆಗಿದ್ದಾರೆ. ಇನ್ನೂಳಿದ 71 ಮಕ್ಕಳ ಆರೋಗ್ಯ ಸ್ಥೀರವಾಗಿದ್ದು, ಪಾಲಕರು ಭಯ ಪಡುವ ಅಗತ್ಯವಿಲ್ಲ ಎಂದು ಜಿಪಂ ಸಿಇಒ ರಾಹುಲ ಶಿಂಧೆ ತಿಳಿಸಿದ್ದಾರೆ.

ಶನಿವಾರ ಚಿಕ್ಕೋಡಿ ಸಾರ್ವಜನಿಕ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡು ಮಾತನಾಡಿದ ಅವರು, ಹಿರೇಕೋಡಿ ಗ್ರಾಮದಲ್ಲಿರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯುತ್ತಿರುವ 400 ಮಕ್ಕಳ ಪೈಕಿ 119 ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು, ವಾಂತಿ ಹಾಗೂ ಜ್ವರದ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆ ಸೆ.12ರಂದು ಚಿಕ್ಕೊಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ 35, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 21, ಬೆಳಗಾವಿ ಜಿಲ್ಲಾಸ್ಪತ್ರೆ (ಬಿಮ್ಸ್)ಯಲ್ಲಿ 15 ಮಕ್ಕಳು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 10 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಆರೋಗ್ಯ ಸ್ಥೀರವಾಗಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಎಂದರು.

ಚಿಕ್ಕೋಡಿ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ 5 ಚಿಕ್ಕ ಮಕ್ಕಳ ತಜ್ಞರು, 10ಜನ ವೈದ್ಯಾಧಿಕಾರಿಗಳು ಹಾಗೂ ಶುಷೋಕ್ರಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಐದು ಆ್ಯಂಬುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.ಈಗಾಗಲೇ ಪ್ರಯೋಗಾಲಯದ ಪರೀಕ್ಷೆಗಾಗಿ 3 ಕುಡಿಯುವ ನೀರಿನ ಮಾದರಿಗಳನ್ನು, 2 ಮಲದ ಮಾದರಿಗಳನ್ನು ಹಾಗೂ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ. ವಸತಿ ಶಾಲೆಯ ಹಾಸ್ಟೆಲ್ ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಎಂದರು.

ಅಸ್ವಸ್ಥಗೊಂಡ ಮಕ್ಕಳಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಬೇಕಾಗುವ ಔಷಧೋಪಚಾರ ನೀಡಬೇಕು.ಆಸ್ಪತ್ರೆಯಲ್ಲಿ ದಾಖಲಾದ ಎಲ್ಲ ಮಕ್ಕಳು ಬೇಗನೆ ಗುಣಮುಖರಾಗಬೇಕು. ಮಕ್ಕಳ ಚಿಕಿತ್ಸೆ ವಿಷಯದಲ್ಲಿ ನಿರ್ಲಕ್ಷೃ ವಹಿಸಿದರೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ವೈದ್ಯಾಧಿಕಾರಿಗಳಿಗೆ ಎಚ್ಚರಿಸಲಾಗಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಜಿಲ್ಲಾ ಆರ್‌ಆರ್‌ಟಿ ತಂಡ, ತಾಲೂಕು ಆರೋಗ್ಯ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದ್ದು, ವರದಿ ಬಳಿಕವೇ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದರು.

ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ಡಿಎಚ್‌ಒ ಡಾ.ಈಶ್ವರಪ್ಪಾ ಗಡಾದ, ಜಿಲ್ಲಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಎಫ್.ಯು. ಪೂಜೇರ,ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವ, ತಾಪಂ ಇಒ ಕೆ.ಎನ್.ವಣ್ಣೂರ, ಡಿವೈಎಸ್‌ಪಿ ಪಿ ಗೋಪಾಲಕೃಷ್ಣ ಗೌಡರ, , ತಹಶೀಲ್ದಾರ ರಾಜೇಶ ಬುರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net