

ಬೆಳಗಾವಿ: ನಗರ, ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಪಂ ಸಿಇಒ ರಾಹುಲ ಶಿಂಧೆ ಅವರು ಮಂಗಳವಾರ ಖಾನಾಪೂರ ತಾಲೂಕಿನ ವಿವಿಧೆಡೆ ಭೇಟಿ ನೀಡಿ, ಮಳೆ ಹಾಗೂ ಪ್ರವಾಹದ ಸ್ಥಿತಿಗತಿಯನ್ನು ಅವಲೋಕಿಸಿದರು.
ತಾಲೂಕಿನ ಇದ್ದಲಹೊಂಡ ಗ್ರಾಪಂ ವ್ಯಾಪ್ತಿಯ ಇದ್ದಲಹೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಮೂಲಭೂತ ಸೌಕರ್ಯಗಳು, ಶಿಕ್ಚಕರು, ಮಕ್ಕಳ ಹಾಜರಾತಿಯ ಕುರಿತು ಮಾಹಿತಿ ಪಡೆದರು. ಖಾನಾಪೂರ-ಗೋವಾ ರಸ್ತೆಯಲ್ಲಿರುವ ಹಾಲಾತ್ರಿ ಹಳ್ಳದ ಪ್ರವಾಹ ಸ್ಥಿತಿಗತಿ ಹಾಗೂ ಸೇತುವೆಯನ್ನು ವೀಕ್ಷಿಸಿ ಗ್ರಾಪಂ, ತಾಪಂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹಳ್ಳದ ಸೇತುವೆಗೆ ಹೊಂದಿಕೊಂಡು ನೀರಿನಲ್ಲಿ ಬಿದ್ದಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪಾಂಡರಿ ನದಿ ಪ್ರವಾಹದಿಂದ ಮುಳುಗಡೆಯಾಗುವ ಲೋಂಡಾ ಗ್ರಾಪಂ ವ್ಯಾಪ್ತಿಯ ಗಾಂಧಿನಗರದ ನಿವಾಸಿಗಳೊಂದಿಗೆ ಚರ್ಚಿಸಿ, ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದರು. ಪ್ರವಾಹ ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಗ್ರಾಪಂ, ತಾಪಂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಲೋಂಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಕಟ್ಟಡ ಹಾಗೂ ಮಕ್ಕಳ ಹಾಜರಾತಿಯನ್ನು ಪರಿಶೀಲಿಸಿದರು.
ವಿದ್ಯುತ್ ಸಂಪರ್ಕ ಕಡಿತದಿಂದ ಮಕ್ಕಳಿಗೆ ತೊಂದರೆಯಾಗದಂತೆ ಶಾಲೆಯ ಎಲ್ಲ ಕೊಠಡಿಗಳಿಗೆ ಚಾರ್ಜಿಂಗ್ ಬಲ್ಬ್ ಅಥವಾ ಸೋಲಾರ ಮೂಲಕ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣ ಅಧಿಕಾರಿ ಎಲ್.ವಿ. ಯಕ್ಕುಂಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ, ತಹಶೀಲ್ದಾರ್ ದುಂಡಪ್ಪ ಕೋಮಾರ, ಪಂಚಾಯತರಾಜ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಜಾಧವ, ಬಿಇಓ ರಾಮಪ್ಪ, ತಾಪಂ ಸಹಾಯಕ ನಿರ್ದೇಶಕಿ (ಗ್ರಾಉ) ರೂಪಾಲಿ ಬಡಕುಂದ್ರಿ, ಸಹಾಯಕ ನಿರ್ದೇಶಕ (ಪಂರಾ) ವಿಜಯ ಕೋತಿನ್ ಇತರರಿದ್ದರು.