

ಬೆಳಗಾವಿ: ಸಾಲಿನ ಸಾಮಾಜಿಕ ಅರಣ್ಯ ಇಲಾಖೆಯಡಿ ಕಾರ್ಯಕ್ರಮಗಳನ್ನು ರೂಪಿಸುವಾಗ ಜನಪರ, ಸಮುದಾಯ ಹಾಗೂ ಸೃಜನಾತ್ಮಕ ಕಾಮಗಾರಿಗಳನ್ನು ಆಯ್ಕೆ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2024-25 ನೇ ಸಾಲಿನ ಅನುಷ್ಠಾನಗೊಂಡ ಕಾಮಗಾರಿಗಳ ಪ್ರಗತಿ ಕುರಿತು ಚರ್ಚಿಸಿದರು. ನಂತರ 2025-26ನೇ ಸಾಲಿನ ಬ್ಲಾಕ್ ಪ್ಲಾಂಟೆಶನ್ ಕಾಮಗಾರಿಗಳನ್ನು ಆಯ್ಕೆ ಮಾಡುವಾಗ ಕಡ್ಡಾಯ ಕನಿಷ್ಠ ಐದು ಸಾವಿರದಿಂದ ಹತ್ತು ಸಾವಿರದ ವರೆಗೆ ಒಂದೇ ಸ್ಥಳದಲ್ಲಿ ಸಸಿಗಳನ್ನು ನಾಟಿ ಮಾಡುವಂತಹ ಪ್ರದೇಶಗಳನ್ನು ಆಯ್ಕೆ ಮಾಡುವುದು. ಕೆರೆ, ನಾಲಾಗಳು, ನೀರು ಹರಿದು ಹೋಗುವ ಸ್ಥಳಗಳಿಗೆ ಮೊದಲ ಆದ್ಯತೆ ನೀಡುವುದು. ಇದರಿಂದಾಗಿ ಕೆರೆಗಳ ಒತ್ತುವರಿ ತಡೆದಂತಾಗುತ್ತದೆ. ಅಲ್ಲದೇ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀರಿನ ತೇವಾಂಶ ಇರುವುದರಿಂದ ಸಸಿಗಳ ಬದುಕುಳಿಯುವ ಪ್ರಮಾಣ ಹೆಚ್ಚಾಗುತ್ತದೆ. ಅವಶ್ಯವಿದ್ದಲ್ಲಿ ಮನರೇಗಾ ಯೋಜನೆಯಡಿ ಅರಣ್ಯ ಪ್ರದೇಶದಲ್ಲಿ ಹೊಸ ಕೆರೆಗಳನ್ನು ನಿರ್ಮಾಣ ಮಾಡುವ ಕಾಮಗಾರಿಗಳನ್ನು ಆಯ್ಕೆ ಮಾಡಬಹುದಾಗಿದೆ. ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ವಲಯದಿಂದ ಹೈಟೆಕ್ ನರ್ಸರಿ, ವೃಕ್ಷೋಧ್ಯಾನವನಗಳು, ಹರ್ಬಲ್ ಗಾರ್ಡನ್ ಹೀಗೆ ಸೃಜನಾತ್ಮಕವಾಗಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ವಲಯ ಅರಣ್ಯ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಪ್ರಸ್ತುತ ಪಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಗೊರವರ, ಬೈಲಹೊಂಗಲ ಹಾಗೂ ಚಿಕ್ಕೋಡಿ ಉಪ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿಗಳಾದ ಕೆಮಸಿಂಗ್ ರಾಠೋಡ ಹಾಗೂ ಕೆಂಪಣ್ಣ ವಣ್ಣೂರ ಮತ್ತು ಜಿಲ್ಲೆಯ ಎಲ್ಲ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.