

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜೇಷ್ಠತಾ ಪಟ್ಟಿ ಮತ್ತು ಬಡ್ತಿ ವಿಷಯದಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ನ. 8 ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಖಜಾಂಚಿ ದಿಲೀಪ್‌ಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಜಿಪಂ ಸಿಇಒ ಡಾ.ಕೆ.ಎನ್. ಅನುರಾಧಾ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು. ರಾಜ್ಯದ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಬೇಕು. ವರ್ಗಾವಣೆಯಲ್ಲಿ ಬಾಧಿತರಿಗೆ ಸೂಕ್ತ ಸ್ಥಳ ನಿಯೋಜನೆ ಮಾಡುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಮೂರು ಹಂತಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹೋರಾಟಗಳಾದ ಅಸಹಕಾರ ಚಳವಳಿ, ಎಲ್ಲ ಜಿಲ್ಲಾ ಪಂಚಾಯಿತಿ ಕಾರ್ಯಾಲಯಗಳ ಮುಂದೆ ಪ್ರತಿಭಟನೆ ಹಾಗೂ ಬೆಂಗಳೂರು ಫ್ರೀಡಂ ಪಾರ್ಕ್ ಚಲೋ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನ.8 ರಂದು ಬೆಳಗ್ಗೆ 10.30 ಕ್ಕೆ ರಾಜ್ಯದ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ರಾಜ್ಯ, ಜಿಲ್ಲಾ, ತಾಲೂಕುಹಂತದ ವಾಟ್ಸ್‌ಆ್ಯಪ್, ಟೆಲಿಗ್ರಾಂ, ಇತರ ಗ್ರೂಪುಗಳಿಂದ ಏಕಕಾಲಕ್ಕೆ ಆನ್‌ಲೈನ್ ಸೇವೆ ಸ್ಥಗಿತಗೊಳಿಸಲಿದ್ದಾರೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆ ಕುರಿತು ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ, ಗ್ರಾಮೀಣ ಪಂಚಾಯತ್ ರಾಜ್ ಸಚಿವರು 2 ತಿಂಗಳ ಕಾಲಾವಕಾಶ ಕೇಳಿದರು. ಆದರೂ ಮಂತ್ರಿಗಳು ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.