

ಕೊಪ್ಪಳ: ಮಣ್ಣು, ದೇಶಕ್ಕಾಗಿ ಭಾರತದ ಹಲವಾರು ಮಹಾನ್ ನಾಯಕರು ಪ್ರಾಣತ್ಯಾಗ ಮಾಡಿದ್ದು, ಅವರ ಹೋರಾಟದ ಫಲವಾಗಿ ನಾವು ಇಂದು ನೆಮ್ಮದಿ ಜೀವನ ನಡೆಸುವಂತಾಗಿದೆ. ಈ ನಿಟ್ಟಿನಲ್ಲಿ ಹೋರಾಟಗಾರರನ್ನು ನಮಿಸುವುದರ ಜತೆಗೆ ನೈತಿಕ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದರು.
ತಾಲೂಕ ಕ್ರಿಡಾಂಗಣದಲ್ಲಿ ಜಿಪಂ, ತಾಪಂ, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ನನ್ನ ಮಣ್ಣು, ನನ್ನ ದೇಶ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶವು ವಿಶ್ವಕ್ಕೆ ಮಾದರಿಯಾಗಿದೆ. ಸ್ವಾತಂತ್ರೃ ದೊರಕುವ ಸಂದರ್ಭದಲ್ಲಿ ಅನೇಕ ಮಹಾನ್ ಹೋರಾಟಗಾರರು, ಯೋಧರು ದೇಶದ ಮಣ್ಣಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರೃ ದೊರೆತು 75 ವರ್ಷ ಗತಿಸಿದ ಪ್ರಯುಕ್ತ ಅದರ ಸವಿನೆನಪಿಗಾಗಿ ಪ್ರತಿ ಗ್ರಾಪಂನಿಂದ ಮಣ್ಣು ಸಂಗ್ರಹಿಸಿ ತಾಲೂಕ ಹಂತದಲ್ಲಿ ದೆಹಲಿಗೆ ತಲುಪಿಸಲಾಗುತ್ತದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಎಚ್.ಮಹೇಶ, ಬಿಇಒ ಶಂಕ್ರಯ್ಯ, ತಾಲೂಕ ಯೋಜನಾಧಿಕಾರಿ ರಾಜಾಸಾಬ್ ನದಾಫ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ, ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ನರೇಗಾ ಸಹಾಯಕ ನಿರ್ದೇಶಕಿ ಕೆ.ಸೌಮ್ಯ, ತಾಪಂ ಸಹಾಯಕ ನಿರ್ದೇಶಕ ಮಹೇಶ, ಪಿಡಿಒಗಳಾದ ನಾಗರಾಜ, ಸವರಾಜ ಬಳಿಗಾರ, ಐಇಸಿ ಸಂಯೋಜಕ ದೇವರಾಜ ಪತ್ತಾರ ಇತರರಿದ್ದರು.