ಶತಮಾನದ ಶಾಲೆಗಿಲ್ಲ ಸಂಭ್ರಮ

21manju1-Web
ಬೆಳಗಾವಿ ನಗರದ ಖಂಜರ್ ಗಲ್ಲಿಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ.
Published on

ಬೆಳಗಾವಿ: ಶತಮಾನ ಪೂರೈಸಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಅಭಿವೃದ್ಧಿ ಪಡಿಸಿ ಆ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಲಕ್ಷಾಂತರ ರೂ. ಅನುದಾನವನ್ನೂ ನೀಡಲಾಗಿದೆ. ಆದರೆ, ಎಸ್‌ಡಿಎಂಸಿ ಸದಸ್ಯರು ಹಾಗೂ ಅಧಿಕಾರಿಗಳ ಕಿತ್ತಾಟದಿಂದ ಕಾಮಗಾರಿ ನನೆಗುದಿಗೆ ಬೀಳುವಂತಾಗಿದೆ.

ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ ಮೂರು ಪ್ರಾಥಮಿಕ ಹಾಗೂ ಒಂದು ಪ್ರೌಢಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು 2018ರಲ್ಲಿಯೇ ಪ್ರತಿ ಶಾಲೆಗೆ ತಲಾ 5 ಲಕ್ಷ ರೂ.ನಂತೆ ಮೊದಲ ಕಂತಿನಲ್ಲಿ 20 ಲಕ್ಷ ರೂ. ಅನುದಾನ ನೀಡಲಾಗಿದೆ. ಆಯಾ ಶಾಲೆಯ ಮುಖ್ಯಗುರು, ಎಸ್‌ಡಿಎಂಸಿಯ ಜಂಟಿ ಖಾತೆಗೆ ಈಗಾಗಲೇ ಅನುದಾನ ವರ್ಗಾವಣೆ ಆಗಿದೆ. ಆದರೆ, ಖರ್ಚು ಮಾಡಲು ಅವಕಾಶವಾಗುತ್ತಿಲ್ಲ.

ನಿಯಮಾವಳಿ ಪ್ರಕಾರ 1ಲಕ್ಷ ರೂ.ಗೂ ಮೇಲ್ಪಟ್ಟ ಮೊತ್ತದ ಯಾವುದೇ ಕಾಮಗಾರಿಯ ಕ್ರಿಯಾಯೋಜನೆಗೆ ಟೆಂಡರ್ ಕರೆಯಬೇಕು. ಈ ಹಿನ್ನೆಲೆಯಲ್ಲಿ ಎಸ್‌ಡಿಎಂಸಿ ಸದಸ್ಯರು ಟೆಂಡರ್ ಹೊರತುಪಡಿಸಿ ಕೆಲಸ ಮಾಡುವುದಕ್ಕೆ ಅವಕಾಶ ಬೇಕೆನ್ನುವ ಬೇಡಿಕೆ ಇಟ್ಟಿದ್ದಾರೆ. ಈ ಕಾರಣದಿಂದ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ವಿಳಂಬವಾಗುವಂತಾಗಿದೆ.

ಇಂಜಿನಿಯರ್‌ಗಳಿಗೆ ಆತಂಕ: ಶಿಕ್ಷಣ ಇಲಾಖೆಗೆ ಸಂಬಂಧಿಸಿ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಅಧಿಕಾರಿ ಹಾಗೂ ತಾಲೂಕು ಮಟ್ಟದಲ್ಲಿ ಸಹಾಯಕ ಇಂಜಿನಿಯರ್‌ಗಳ ಹುದ್ದೆಗಳು ಖಾಲಿ ಇವೆ. ಕ್ರಿಯಾಯೋಜನೆ ಸಲ್ಲಿಸಿ ಕಾಮಗಾರಿ ಆರಂಭಕ್ಕೆ ಅನುಮೋದನೆ ಪಡೆಯಲು ಲೋಕೋಪಯೋಗಿ ಇಲಾಖೆ, ಪಿಆರ್‌ಇಡಿ, ನಿರ್ಮಿತಿ ಕೇಂದ್ರ, ಕೆಆರ್‌ಐಡಿಎಲ್ ಇಂಜಿನಿಯರ್‌ಗಳ ಮೊರೆ ಹೋಗಬೇಕಿದೆ. ಆದರೆ, ಈಗಾಗಲೇ ನಾನಾ ಶಾಲೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನೇ ಪೂರೈಸಲಾಗದ ಈ ಇಲಾಖೆ ಇಂಜಿನಿಯರ್‌ಗಳಿಗೆ ಕಾಮಗಾರಿ ಉಸ್ತುವಾರಿ ನೀಡಲು ಆತಂಕ ಉಂಟಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅನುದಾನ ದುರ್ಬಳಕೆ ಸಾಧ್ಯತೆ: ಅತಿವೃಷ್ಟಿಯಿಂದ ಹಾಳಾಗಿರುವ ಎಲ್ಲ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಮತ್ತು ಹೊಸ ಕಟ್ಟಡಕ್ಕಾಗಿ ಈಗಾಗಲೇ ಸರ್ಕಾರವು ಪ್ರತಿ ಶಾಲೆಗೆ ಲಕ್ಷಾಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ನೆರೆ ಕಾಮಗಾರಿ ಹೆಸರಿನಲ್ಲಿ ಈ ಅನುದಾನ ದುರ್ಬಳಕೆ ಮಾಡುವ ಸಾಧ್ಯತೆಯಿದೆ. ಹಾಗಾಗಿ ಜಿಪಂ ಸಿಇಒ, ಜಿಲ್ಲಾಧಿಕಾರಿ ಈ ಅನುದಾನ ಬಳಕೆ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದು ಜಿಪಂ, ತಾಪಂ ಸದಸ್ಯರು ಆಗ್ರಹಿಸಿದ್ದಾರೆ.

ಅನಗತ್ಯ ವಿಳಂಬ

ಶತಮಾನ ಪೂರೈಸಿದ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ವರ್ಷಗಳ ಸಮಯ ಬೇಕಿಲ್ಲ. ಆದರೆ, ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಬಿಇಒ ಮಧ್ಯೆ ಸಮನ್ವಯತೆ ಇಲದೆ ಅಭಿವೃದ್ಧಿ ಕೈಗೊಂಡಿಲ್ಲ. 2019ರಲ್ಲಿ ಸುರಿದ ಮಳೆ ಮತ್ತು ಪ್ರವಾಹ ನೆಪದಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಈಗಾಗಲೇ ಎಸ್‌ಡಿಎಂಸಿ ಸಮಿತಿಗಳು ಬದಲಾಗಿವೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷೃ ಮಾಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿವೃಷ್ಟಿ ಸಂಭವಿಸಿದ್ದರಿಂದ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿರುವುದು ನಿಜ. ಶೀಘ್ರದಲ್ಲಿ ಕಾಮಗಾರಿ ಕೈಗೊಂಡು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು.| ಡಾ.ಆನಂದ ಪುಂಡಲೀಕ ಡಿಡಿಪಿಐ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net