

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರೊನಾಘಾತ ಮುಂದುವರಿದಿದ್ದು, ಭಾನುವಾರ ಮತ್ತೆ 22 ಜನರಲ್ಲಿ ಸೋಂಕು ದೃಢಪಟ್ಟಿದೆ. ದಿನ ಕಳೆದಂತೆ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಪಾಟಿಸಿವ್ ಪ್ರಕರಣಗಳ ಸಂಖ್ಯೆಯಿಂದಾಗಿ ಜನರು ಬೆಚ್ಚಿ ಬಿದ್ದಿದ್ದಾರೆ. ಇದೀಗ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
ಭಾನುವಾರ ಬೆಳಕಿಗೆ ಬಂದ 22 ಪ್ರಕರಣಗಳ ಪೈಕಿ 13 ಮಹಿಳೆಯರು, 8 ಪುರುಷರು ಹಾಗೂ ಮೂರು ವರ್ಷದ ಮಗು ಸೋಂಕಿಗೆ ತುತ್ತಾಗಿದೆ. ಇವರೆಲ್ಲ ರಾಜಸ್ಥಾನ, ಅಜ್ಮೀರದ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ. ಇಷ್ಟು ದಿನ ತಬ್ಲಿಘಿಗಳಿಂದ ಜಿಲ್ಲೆಗೆ ಕರೊನಾ ಉಪಟಳವಿತ್ತು. ಈಗ ರಾಜಸ್ಥಾನ ಹಾಗೂ ಅಜ್ಮೀರ ಪ್ರವಾಸಿಗರಿಂದ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಮೇ 2ರಂದು ಗಡಿ ಪ್ರವೇಶ: ರಾಜಸ್ಥಾನ, ಅಜ್ಮೀರದಿಂದ 38 ಜನರು ನಿಪ್ಪಾಣಿ ಮೂಲಕ ಗಡಿ ಪ್ರವೇಶ ಮಾಡಿದ್ದರು. ಎಲ್ಲರನ್ನು ಕ್ವಾರಂಟೈನ್ ಮಾಡಿ ಇವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಸೋಂಕಿತರು ಎಲ್ಲೆಲ್ಲಿಯವರು?: ಸೋಂಕಿತರಲ್ಲಿ ಹುಕ್ಕೇರಿ-12, ರಾಯಬಾಗ-5, ಚಿಕ್ಕೋಡಿ-2, ಬಾಗಲಕೋಟೆ ಜಿಲ್ಲೆ-8, ಅಥಣಿ, ನಿಪ್ಪಾಣಿ ಹಾಗೂ ಬೆಳಗಾವಿಯ ತಲಾ ಒಬ್ಬರು ರಾಜಸ್ಥಾನ, ಅಜ್ಮೀರದಿಂದ ಬಂದಿದ್ದರು. ಇವರೆಲ್ಲರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಪ್ಪಿದ ಅನಾಹುತ: ಅಧಿಕಾರಿಗಳ ಮುನ್ನೆಚ್ಚರಿಕೆಯಿಂದ ಸಂಭವನೀಯ ದೊಡ್ಡ ಅಪಾಯ ತಪ್ಪಿದೆ. ರಾಜಸ್ಥಾನ ಹಾಗೂ ಅಜ್ಮೀರದಿಂದ ಖಾಸಗಿ ಬಸ್‌ನಲ್ಲಿ ನಿಪ್ಪಾಣಿ ಚೆಕ್‌ಪೋಸ್ಟ್ ಮೂಲಕ ಕರ್ನಾಟಕಕ್ಕೆ ಬರುತ್ತಿದ್ದ ಇವರನ್ನು ಅಧಿಕಾರಿಗಳು ತಡೆ ಹಿಡಿದು ವಾಪಸ್ ಕಳುಹಿಸಿದ್ದರು. ಬಳಿಕ ಈ ಪ್ರಯಾಣಿಕರು ಚಕ್ಕಡಿ ದಾರಿ, ಕಾಲು ದಾರಿ ಮೂಲಕ ಪೊಲೀಸರ ಕಣ್ಣು ತಪ್ಪಿಸಿ ಕರ್ನಾಟಕ ಪ್ರವೇಶ ಮಾಡುತ್ತಿದ್ದಾಗ ಅಧಿಕಾರಿಗಳು ಇವರನ್ನು ಹಿಡಿದು ಕ್ವಾರಂಟೈನ್ ಮಾಡಿದ್ದರಿಂದ ಇವರೆಲ್ಲ ಜಿಲ್ಲೆಯ ಒಳಗೆ ನುಸುಳಿಲ್ಲ. ಲಾಕ್‌ಡೌನ್ ಆದಾಗಿನಿಂದಲೂ ಇವರೆಲ್ಲರೂ ರಾಜಸ್ಥಾನ, ಅಜ್ಮೀರದಲ್ಲೇ ಒಂದೂವರೆ ತಿಂಗಳು ಇದ್ದರು.
ರಾಜ್ಯ ಪಟ್ಟಿಯಲ್ಲಿ ಬೆಳಗಾವಿಗೆ 2ನೇ ಸ್ಥಾನ: ಕರೊನಾ ಸೋಂಕಿತರ ರಾಜ್ಯಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯು ಎರಡನೇ ಸ್ಥಾನಕ್ಕೇರಿದೆ. ಇಷ್ಟು ದಿನ ಮೂರನೇ ಸ್ಥಾನದಲ್ಲಿದ್ದ ಕುಂದಾನಗರಿ ಖ್ಯಾತಿಯ ಜಿಲ್ಲೆ, ಭಾನುವಾರ ಒಂದೇ ದಿನ 22 ಕರೊನಾ ಪ್ರಕರಣ ದೃಢಪಟ್ಟಿದ್ದರಿಂದ 2ನೇ ಸ್ಥಾನಕ್ಕೇರಿದೆ. ಬೆಂಗಳೂರು ನಗರ ಬಿಟ್ಟರೆ ಅತಿ ಹೆಚ್ಚು ಸೋಂಕಿತರಿರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಇದರಿಂದಾಗಿ ಜನರಲ್ಲಿದ್ದ ಆತಂಕ ಇನ್ನಷ್ಟು ಹೆಚ್ಚಿಸಿದೆ.
ಜಿಲ್ಲೆಯಲ್ಲಿ 14 ಸೋಂಕಿತರಿಂದ 85 ಜನರಿಗೆ ವೈರಸ್: ಬೆಳಗಾವಿಯಲ್ಲಿ ಏ. 4ರ ವರೆಗೆ ಒಬ್ಬರಲ್ಲೂ ಸೋಂಕು ಕಾಣಿಸಿಕೊಂಡಿರಲಿಲ್ಲ. ದೆಹಲಿ ತಬ್ಲಿಘಿ ಜಮಾತ್‌ನಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 91 ಮಂದಿ ಬೆಳಗಾವಿಗೆ ಬಂದ ಬಳಿಕ 14 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲೆಯ ಹಿರೇಬಾಗೇವಾಡಿ, ಪಿರನವಾಡಿ, ಯಳ್ಳೂರು, ಬೆಳಗುಂದಿ, ಸಂಕೇಶ್ವರ, ಕುಡಚಿಯಲ್ಲಿ ತಬ್ಲಿಘಿ ಜಮಾತ್‌ನಲ್ಲಿ ಪಾಲ್ಗೊಂಡಿದ್ದವರಿಗೆ ಸೋಂಕು ದೃಢಪಟ್ಟಿತ್ತು. ಶನಿವಾರದವರೆಗಿನ ಮಾಹಿತಿ ಪ್ರಕಾರ ಈ 14 ಸೋಂಕಿತರ ಸಂಪರ್ಕ ಹೊಂದಿದ್ದ ಜಿಲ್ಲೆಯ 85 ಜನರಲ್ಲಿ ಸೋಂಕು ಪತ್ತೆಯಾಗಿದೆ.
7,873 ಜನರ ಮೇಲೆ ನಿಗಾ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 7,873 ಜನರ ಮೇಲೆ ನಿಗಾ ವಹಿಸಲಾಗಿದೆ. 2,966 ಜನರು 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 77 ಜನರನ್ನು ಐಸೋಲೇಟೆಡ್ ವಾರ್ಡ್‌ನಲ್ಲಿರಿಸಲಾಗಿದೆ. 3,173 ಜನ 14 ದಿನಗಳ ಕ್ವಾರಂಟೈನ್ ಹಾಗೂ 1,657 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 6,576 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. ಒಟ್ಟಾರೆ 107 ಮಾದರಿಗಳು ದೃಢಪಟ್ಟಿವೆ. 6,121 ಮಾದರಿಗಳು ನೆಗೆಟಿವ್ ಬಂದಿವೆ. ಇನ್ನೂ 272 ಮಾದರಿಗಳ ವರದಿ ಬರುವುದು ಬಾಕಿ ಇದೆ ಎಂದು ಪ್ರಕಟಣೆ ತಿಳಿಸಿದೆ.
ಆರೋಗ್ಯ ಇಲಾಖೆ ಹಾಗೂ ಪೊಲೀಸರ ಕಣ್ತಪ್ಪಿಸಿ ಜಿಲ್ಲೆ ಪ್ರವೇಶ ಮಾಡುವುದಕ್ಕೆ ಹೊಂಚು ಹಾಕಿದ್ದ ರಾಜಸ್ಥಾನ, ಅಜ್ಮೀರ ಪ್ರವಾಸ ಮಾಡಿದ್ದ 38 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ, ಬೆಳಗಾವಿ