ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೇಂದ್ರದ ಭರವಸೆ

yaduveer
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಬಹು ಗ್ರಾಮ ಸ್ಕೀಮ್ (ಎಂವಿಎಸ್)ಗಳನ್ನು ತ್ವರಿತವಾಗಿ ಅನುಮೋದನೆ ಮಾಡಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್ ಪಾಟೀಲ್ ಅವರಿಗೆ ಮನವಿ ಮಾಡಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದ ನಂತರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಎಂವಿಎಸ್‌ಗೆ ತ್ವರಿತ ಅನುಮೋದನೆ ನೀಡಬೇಕಾಗಿದೆ ಎಂದು ಮಡಿಕೇರಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗದ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದರು ಎಂದು ಸಂಸದರು ವಿವರಿಸಿದ್ದಾರೆ. ಈ ಸಂಬಂಧ ಕೊಡಗು ಜಿಲ್ಲೆಯವರ ನೀರಿನ ಸಮಸ್ಯೆ ನೀಗಿಸಲು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಅತಿ ಶೀಘ್ರದಲ್ಲೇ ಇದಕ್ಕೆ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ ಎಂದರು.

ಮನವಿ ಸ್ವೀಕರಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಮಾತನಾಡಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net