

ದಾವಣಗೆರೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರು ಮತ್ತು ಯುವಕರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ, ಶಿಕ್ಷಣ, ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗಿದೆ.
ಜನಸಾಮಾನ್ಯರ ದೃಷ್ಟಿಯಿಂದ ಆಶಾದಾಯಕವಾಗಿದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ಸಿಕ್ಕಿಲ್ಲ. ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ ಎನ್ನುವ ಮಾತೂ ಕೇಳಿಬಂದಿದೆ.
ರಾಜ್ಯಕ್ಕೆ ಹಲವು ಯೋಜನೆಗಳ ನಿರೀಕ್ಷೆಯಿತ್ತಾದರೂ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡುವ ಬಗ್ಗೆಯೂ ಚಕಾರವೆತ್ತಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.
ರಾಜ್ಯಕ್ಕೆ ಹೂರಣವಿಲ್ಲದ ಹೋಳಿಗೆ: ಕೇಂದ್ರದ ಈ ಬಾರಿಯ ಬಜೆಟ್ ರಾಜ್ಯಕ್ಕೆ ಹೂರಣವಿಲ್ಲದ ಹೋಳಿಗೆಯಂತಿದೆ. 28 ರಾಜ್ಯಗಳ ಪೈಕಿ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಎನ್.ಡಿ.ಎ. ಸರ್ಕಾರ ಕಳೆದ 10 ಬಾರಿಯೂ ರಾಜ್ಯಕ್ಕೆ ತೋರಿದ ಮಲತಾಯಿ ಧೋರಣೆಯನ್ನು 11ನೇ ಬಜೆಟ್‌ನಲ್ಲಿಯೂ ಮುಂದುವರಿಸಿದೆ. ರಾಜ್ಯದ ಯಾವುದೇ ನೀರಾವರಿ ಯೋಜನೆಗಳಿಗೆ ಹಾಗೂ ಎ.ಐ.ಐ.ಎಂ.ಎಸ್.ಗೆ ಅನುದಾನ ತರುವಲ್ಲಿ ರಾಜ್ಯದಿಂದ ಆಯ್ಕೆಗೊಂಡ ಕೇಂದ್ರದ ಸಚಿವರು ವಿಫಲರಾಗಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿ ಹಿನ್ನೆಡೆ. ಹೊಸದಾಗಿ 100 ನಗರಗಳಲ್ಲಿ ಕೈಗಾರಿಕಾ ಪಾರ್ಕ್‌ಗೆ ಉತ್ತೇಜನ ನೀಡುತ್ತೇವೆ ಎನ್ನುವ ಯೋಜನೆ ಈಗಾಗಲೇ ವಿಫಲವಾಗಿರುವ 100 ಸ್ಮಾರ್ಟ್ ಸಿಟಿ ಯೋಜನೆಯ ದಾರಿ ಹಿಡಿಯದಿರಲಿ. ಕರ್ನಾಟಕದಲ್ಲಿರುವ ಕೆಲವು ರಾಜ್ಯ ಹೆದ್ದಾರಿಗಳ ಉನ್ನತೀಕರಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವುದನ್ನು ಮರೆತ ಕೇಂದ್ರ ಸರ್ಕಾರ. ಮಕ್ಕಳ ಕಾಳಜಿಯ ಬಗ್ಗೆ ಒಂದೂ ಮಾತು ಆಡಿಲ್ಲ. ಗ್ರಾಮೀಣ ನಿರುದ್ಯೋಗ, ಶಿಕ್ಷಣದ ಬಗ್ಗೆ ನಿರ್ಲಕ್ಷೃ, ಕೃಷಿ ವಲಯದ ಅನುದಾನ ಇಳಿಕೆ.
l ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ
ಅಭಿವೃದ್ಧಿ ಭಾರತದ ಸಂಕಲ್ಪ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಸಮೃದ್ಧ, ಬಲಶಾಲಿ, ಅಭಿವೃದ್ಧಿಯ ಭಾರತದ ಸಂಕಲ್ಪವನ್ನು ಪ್ರಸ್ತಾಪಿಸಲಾಗಿದೆ. ಬಡವರು, ಮಹಿಳೆಯರು, ಯುವಕರು, ರೈತರು ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೃಷಿ, ಉದ್ಯೋಗ ಸೃಷ್ಟಿ, ಕೌಶಲಾಭಿವೃದ್ಧಿ ಮತ್ತು ಶಿಕ್ಷಣಕ್ಕೆ ಆದ್ಯತೆ ಕೊಡಲಾಗಿದೆ. 1000 ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ, 20 ಲಕ್ಷ ಯುವಕರಿಗೆ ಕೌಶಲಾಭಿವೃದ್ಧಿ ಯೋಜನೆಯಡಿ ತರಬೇತಿ, 500 ಟಾಪ್ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌ಗೆ ಅವಕಾಶ, ಮಹಿಳೆಯರ ಸಬಲೀಕರಣಕ್ಕಾಗಿ ಲಖ್ಪತಿ ದೀದಿ ಯೋಜನೆಯಡಿ 3 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಇನ್ನೂ ಹಲವು ಯೋಜನೆಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ.
l ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸದ
ಎಲ್ಲ ವರ್ಗಗಳ ಅಭಿವೃದ್ಧಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಯುವಕರು, ರೈತರು, ಮಹಿಳೆಯರು, ಬಡವರು ಸೇರಿ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಯುವಕರಿಗೆ ಶಿಷ್ಯವೇತನ ಸಹಿತ ಕೌಶಲ ತರಬೇತಿ, ಮಹಿಳಾ ಸಬಲೀಕರಣಕ್ಕೆ 3 ಲಕ್ಷ ಕೋಟಿ ರೂ. ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ, ಕೃಷಿ, ಮೂಲಸೌಕರ್ಯ, ಸಣ್ಣ ಕೈಗಾರಿಕೆ ವಲಯಕ್ಕೆ ಆದ್ಯತೆ ನೀಡಿದ್ದಾರೆ. ತೆರಿಗೆ ಭಾರವನ್ನು ಕಡಿಮೆ ಮಾಡುವುದರ ಮೂಲಕ ಬಡ, ಮಧ್ಯಮ, ಸಂಬಳದಾರರಿಗೂ ಸಹಾಯ ಮಾಡಿದ್ದಾರೆ.
l ರಾಜಶೇಖರ ನಾಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ
ಆಶಾದಾಯಕ ಮುಂಗಡಪತ್ರ: ಕೇಂದ್ರದ ಬಜೆಟ್ ಶ್ರೀಸಾಮಾನ್ಯನಿಗೆ ಆಶಾದಾಯಕವಾಗಿದೆ. ಆದಾಯ ತೆರಿಗೆಯಲ್ಲಿ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಮಾರ್ಪಾಡು ಮಾಡದೆ ಕೇವಲ ಸಂಬಳದಾರರಿಗೆ ಪ್ರಮಾಣಿತ ಕಡಿತದಲ್ಲಿ 50 ಸಾವಿರ ರೂ.ಗಳಿಂದ 65 ಸಾವಿರ ರೂ.ಗೆ ಏರಿಸಿರುವುದು ಬಿಟ್ಟರೆ ಮಧ್ಯಮ ವರ್ಗದ ಮತ್ತು ಸಂಬಳದಾರರಿಗೆ ಅನುಕೂಲವಾಗಿಲ್ಲ. ಜಿ.ಎಸ್.ಟಿಯಲ್ಲಿ 2017-18, 2018-19 ರ ಸಾಲಿಗೆ ಕ್ಷಮಾದಾನ ಯೋಜನೆ ಪ್ರಕಟಿಸದಿರುವುದು, ಜೂನ್ 22ರ ಜಿ.ಎಸ್.ಟಿ ಕೌನ್ಸಿಲ್ ಸಭೆಯಲ್ಲಿ ಕ್ಷಮಾದಾನ ಮಂಡಿಸಿದ್ದು, ಸೂಚನಾ ಪತ್ರಗಳನ್ನು ಜಿ.ಎಸ್.ಟಿ ಕಚೇರಿಗಳಿಗೆ ಇದುವರೆಗೂ ಕಳಿಸದಿರುವುದು ನಿಜಕ್ಕೂ ಶೋಚನೀಯ. ಸೂಚನಾ ಪತ್ರಗಳನ್ನು ಜಿ.ಎಸ್.ಟಿ ಕಚೇರಿಗಳಿಗೆ ಕಳಿಸಿಕೊಟ್ಟರೆ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕಟ್ಟುವಲ್ಲಿ ಹೆಚ್ಚುವರಿ ಅನುಕೂಲ ಕೊಟ್ಟಂತಾಗುತ್ತದೆ.
l ಜಂಬಗಿ ರಾಧೇಶ್, ವಲಯ ಉಪಾಧ್ಯಕ್ಷರು, ರಾಜ್ಯ ತೆರಿಗೆ ಸಲಹೆಗಾರರ ಸಂಘ
ಗೌರಿಯರಿಗೆ ಶಕ್ತಿ: ಗೌರಿ ಹಬ್ಬದ ಉಡುಗೊರೆಯಾಗಿ ಮಹಿಳಾ ಸಂಬಲೀಕರಣಕ್ಕೆ 3 ಕೋಟಿ ರೂ. ಕೊಟ್ಟಿದ್ದಾರೆ. ಸ್ತ್ರೀಯರಿಗೆ ಆಸ್ತಿ ಖರೀದಿಸಲು ವಿಶೇಷ ಯೋಜನೆ ನೀಡಲಾಗಿದೆ. ಉದ್ಯೋಗ, ಕೌಶಲಾಭಿವೃದ್ಧಿಗೆ ಒತ್ತು ಕೊಡಲಾಗಿದೆ. ಮುದ್ರಾ ಸಾಲ ಹೆಚ್ಚಿಸಲಾಗಿದೆ. ಸ್ಟ್ರೀಟ್ ಫುಡ್ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನಾರಿಯರಿಗೆ ಚೈತನ್ಯ ತುಂಬಿದ್ದಾರೆ.
l ಪುಷ್ಪಾ ವಾಲಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ
ಸಂತುಲಿತ, ಸಮೃದ್ಧಿಯ ಬಜೆಟ್: ಜಗತ್ತಿನ ಬಲಾಢ್ಯ ರಾಷ್ಟ್ರಗಳು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಶಿಷ್ಟವಾದ ಜನಸ್ನೇಹಿ ಆಯವ್ಯಯವನ್ನು ಮಂಡಿಸಿರುವುದು ಪ್ರಶಂಸನಿಯವಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರಿಗೆ ತೆರಿಗೆಯನ್ನು ತಗ್ಗಿಸಿರುವ ನಿರ್ಣಯದಿಂದ, ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗವಕಾಶಕ್ಕೆ ಉತ್ತೇಜನ ದೊರೆಯಲಿದೆ. ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳಿಗೆ ಸಾಮಾಜಿಕವಾಗಿ ಶಕ್ತಿ ತುಂಬಲು 3 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಸ್ಟಾರ್ಟಪ್, ಹೊಸ ಉದ್ಯೋಗಗಳಿಗಂತೂ ಈ ಬಜೆಟ್ ವರದಾನದಂತಿದೆ. ಇಷ್ಟು ದಿನ ಹೇರಲಾಗಿದ್ದ ಏಂಜಲ್ ಟ್ಯಾಕ್ಸೃ್ ಈಗ ಸಂಪೂರ್ಣ ರದ್ದಾಗಿದೆ. ಇದರಿಂದ ದೇಶದಲ್ಲಿ ಅಸಂಖ್ಯ ಉದ್ಯೋಗ ಸೃಷ್ಟಿಯಾಗಲಿವೆ.
l ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ
ರೈಲ್ವೆ ಯೋಜನೆಗಳಿಗೆ ಒತ್ತು: ರೈಲ್ವೆಗೆ ಕೆಲವು ಉತ್ತಮ ಘೋಷಣೆಗಳನ್ನು ಮಾಡಿದರೆ. ಹೊಸ ಮಾರ್ಗಕ್ಕೆ ಅನುದಾನ, ಘೋಷಣೆ ಮಾಡಿದ ಹಳೆಯ ಮಾರ್ಗಕ್ಕೆ ಹೆಚ್ಚಿನ ಹಣ ನೀಡಿದ್ದು, ರೈಲು ಮಾರ್ಗ ವಿದ್ಯುದೀಕರಣಕ್ಕೆ ಒತ್ತು ನೀಡಿದ್ದು ಒಳ್ಳೆಯ ಬೆಳವಣಿಗೆ.
ದೇಶದ ಪ್ರತಿಯೊಂದು ರೈಲ್ವೆ ಮಾರ್ಗವೂ ಕೆಲವೇ ವರ್ಷಗಳಲ್ಲಿ ವಿದ್ಯುದೀಕರಣಗೊಳ್ಳಲಿವೆ. ಡೀಸೆಲ್ನಿಂದ ಆಗುವ ಪರಿಸರ ಮಾಲಿನ್ಯವನ್ನು ಇದರಿಂದ ತಡೆಗಟ್ಟಬಹುದು. ಪರಿಣಾಮವಾಗಿ ಪ್ರತಿ ಕಿಲೋ ಮೀಟರ್ ಖರ್ಚನ್ನು ಕಡಿಮೆ ಮಾಡಬಹದು. ಯಾತ್ರಿಗಳಿಗೆ ರೈಲು ಪ್ರಯಾಣ ಸುಖಕರವಾಗಲಿದೆ.
l ರೋಹಿತ್ ಎಸ್. ಜೈನ್, ನೈರುತ್ಯ ರೈಲ್ವೆ ವಲಯದ ಪ್ರಯಾಣಿಕರ ಸಮಿತಿ ಪ್ರಧಾನ ಕಾರ್ಯದರ್ಶಿ
ಸರ್ವರಿಗೆ ಸಮಬಾಳು ಸಮಪಾಲು: ಪ್ರಧಾನಿ ಮೋದಿ ಸರ್ಕಾರ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದೆ. ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳಿಗೆ ಸಾಮಾಜಿಕವಾಗಿ ಶಕ್ತಿ ತುಂಬಲು 3 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಆದಾಯ ತೆರಿಗೆಗೆ ವಿನಾಯಿತಿ ನೀಡಿದೆ. ಜತೆಗೆ, 1 ಕೋಟಿ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮುಖೇನಾ ಇದೊಂದು ಸುಸ್ಥಿರ ಅಭಿವೃದ್ಧಿ ಬಜೆಟ್ ಆಗಿದೆ.
l ರಮೇಶ್ ಎನ್.ಜಿ. ಅಸಿಸ್ಟೆಂಟ್ ಪ್ರೊಪೆಸರ್, ಹರಿಹರ
ಭದ್ರಾ ಮೇಲ್ದಂಡೆ ಯೋಜನೆಗಿಲ್ಲ ಹಣ: ರಾಜ್ಯದ ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಭರವಸೆ, ಅನುದಾನ ನೀಡದೆ ನಿರಾಸೆ ಮೂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಮೀಸಲಿಟ್ಟ ಹಣ ಸಹ ಬಿಡುಗಡೆ ಮಾಡಿಲ್ಲ. ರಾಜ್ಯದಿಂದ ಐವರು ಕೇಂದ್ರ ಸಚಿವರಿದ್ದರೂ ಬಜೆಟ್‌ನಲ್ಲಿ ಹೊಸ ಯೋಜನೆಗಳಿಗೆ ಅನುದಾನ ನೀಡದಿರುವುದು ಗಮನಿಸಿದರೆ ಕೇಂದ್ರಕ್ಕೆ ಕರ್ನಾಟಕ ನೆಪಕ್ಕೆ ಮಾತ್ರ ಇರುವಂತಿದೆ.
l ನಿಂಗಪ್ಪ ಪುರಸಭೆ ಸದಸ್ಯ ಚನ್ನಗಿರಿ.
ಚಿನ್ನ, ಬೆಳ್ಳಿ ತೆರಿಗೆ ಕಡಿಮೆಯಾಗಿದ್ದು ಖುಷಿ: ಮಹಿಳೆಯರಿಗೆ ಅವಶ್ಯಕವಾಗಿ ಬೇಕಾದ ಚಿನ್ನ-ಬೆಳ್ಳಿಯ ತೆರಿಗೆಯನ್ನು ಕಡಿಮೆ ಮಾಡಿರುವುದು ಖುಷಿ ವಿಚಾರ. ಇದರಿಂದ ಬಡವರು, ಮಧ್ಯಮ ವರ್ಗದವರ ಬಂಗಾರ ಖರೀದಿ ಕನಸಿಗೆ ರೆಕ್ಕೆ ಮೂಡಿದಂತಾಗಿದೆ. 20 ಲಕ್ಷ ಮಹಿಳೆಯರ ಕೌಶಲಾಭಿವೃದ್ದಿ ತರಭೇತಿ ಹಾಗೂ ಮಧ್ಯಮ ವರ್ಗದವರ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಿರುವುದು ಸಂತಸ ತಂದಿದೆ.
l ಬಿ.ಎನ್. ನೇತ್ರಾವತಿ ಅಪ್ತ ಸಮಾಲೋಚಕಿ ಮಹಿಳಾ ಸಾಂತ್ವನ ಚನ್ನಗಿರಿ.
ಎಲ್ಲ್ಲ ವರ್ಗಗಳ ಸರ್ವಸ್ಪರ್ಶಿಯಾಗಿದೆ: ಕೇಂದ್ರದ ಈ ಬಜೆಟ್ ಸಮಾಜದ ಎಲ್ಲ್ಲ ವರ್ಗಗಳ ಸರ್ವಸ್ಪರ್ಶಿ ಹಾಗೂ ದೂರದೃಷ್ಠಿಯಿಂದ ಕೂಡಿದೆ. ದೇಶದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಪ್ರಕಟಿಸಿರುವುದು ದೇಶದ ಅಭಿವೃದ್ಧಿಗೆ ಈ ಬಜೆಟ್ ಮೈಲಿಗಲ್ಲಾಗಲಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಉದ್ಯೋಗ, ಪ್ರಧಾನಮಂತ್ರಿಗಳ ಗರಿಬ್ ಯೋಜನೆಯಡಿ ವರ್ಷಗಳ ಕಾಲ ಉಚಿತ ಅಕ್ಕಿ, ವಿಶೇಷವಾಗಿ ರೈತರಿಗೆ ಹಾಗೂ ಮಹಿಳೆಯರಿಗೆ ಈ ಬಜೆಟ್ ಆಶಾದಾಯಕವಾಗಿದೆ. ಬಹುಮುಖ್ಯವಾಗಿ ಭಾರತ ಜಗತ್ತಿನಲ್ಲಿಯೇ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲು ಈ ಬಜೆಟ್ ಸಹಕಾರಿಯಾಗಲಿದೆ.
l ಎಂ.ಪಿ. ರೇಣುಕಾಚಾರ್ಯ ಮಾಜಿ ಸಚಿವ. ಹೊನ್ನಾಳಿ
ಬ್ಯಾಂಕ್ ಸಾಲ ಮನ್ನಾ ಮಾಡಿಲ್ಲ: ಮಧ್ಯಮ ವರ್ಗ, ಕೂಲಿ ಕಾರ್ಮಿಕ, ಕೃಷಿಕರ ಮೇಲೆ ಕಾಳಜಿ ಇಲ್ಲದ ಬಜೆಟ್ ಇದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಸಹಕಾರಿ ಬ್ಯಾಂಕ್ ಸಾಲ ಸಹ ಮನ್ನಾ ಮಾಡಿಲ್ಲ. ಕಳೆದ ಹತ್ತು ವರ್ಷಗಳಿಂದ ಮಾಧ್ಯಮಗಳಲ್ಲಿ ಪ್ರಚಾರ ಪಡೆದದ್ದಷ್ಟೇ ಕೇಂದ್ರದ ಸಾಧನೆ ಹೊರತಾಗಿ ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಅಗತ್ಯ ಅನುದಾನ ಕೇಳುವ ಧೈರ್ಯ ರಾಜ್ಯದ ಯಾವ ಬಿಜೆಪಿ ಸಂಸದರಿಗೂ ಇಲ್ಲ.
l ಮೇಘರಾಜ್ ರೈತ, ನ್ಯಾಮತಿ
ರಾಜ್ಯದ ಜನತೆಗೆ ನಿರಾಸೆ: ನಿರ್ಮಲಾ ಸೀತಾರಾಮನ್ ಅವರ 7ನೇ ಬಜೆಟ್ ಇದಾಗಿದ್ದು, ಇದರಲ್ಲೂ ನಿರೀಕ್ಷಿತ ಮಟ್ಟದಲ್ಲಿ ಕರ್ನಾಟಕಕ್ಕೆ ವಿಶೇಷ ಅನುದಾನ ಇಲ್ಲದಿರುವುದು ದುರದೃಷ್ಟ. ಯುವ ಜನತೆ ಮತ್ತು ಕೌಶಲಾಭಿವೃದ್ಧಿ ಘೋಷಣೆ ಮಾಡಿದ್ದು ಕಟ್ಟಕಡೆಯ ವ್ಯಕ್ತಿಗೆ ಈ ಯೋಜನೆ ಸುಲಭವಾಗಿ ತಲುಪಿದರಷ್ಟೆ ಅದರ ಉದ್ದೇಶ ಈಡೇರುತ್ತದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆ ಸಂಸದರನ್ನು ಆಯ್ಕೆ ಮಾಡಿದ್ದರೂ ರಾಜ್ಯಕ್ಕೆ ವಿಶೇಷ ಅನುದಾನ ಸಿಗದಿರುವುದು ನಿರಾಸೆ ಮೂಡಿಸಿದೆ.
l ಕವಿತಾ ಬಳಿಗಾರ್ ಗೃಹಿಣಿ, ನ್ಯಾಮತಿ.