

ರಾಮನಗರ: ಕೋಲ್ಕತದ ಘಟನೆ ಖಂಡಿಸಿ ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ರಾಮನಗರ-ಚನ್ನಪಟ್ಟಣ ಶಾಖೆ ಪದಾಧಿಕಾರಿಗಳು ಹೊರ ರೋಗಿಗಳಿಗೆ ಚಿಕಿತ್ಸೆ ಬಂದ್ ಮಾಡಿ ಶನಿವಾರ ರಾಮನಗರದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ವೇಳೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಾಗಿ ವಿಶೇಷ ಹಾಗೂ ಕೇಂದ್ರೀಕೃತ ಕಾನೂನು ಜಾರಿಗೆ ಒತ್ತಾಯಿಸಿದರು.
ಕೋಲ್ಕತದಲ್ಲಿ ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವೈದ್ಯೆ ಡಾ.ಮೌಮಿತಾ ದೇಬನಾಥ್ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯನ್ನು ನಾಗರಿಕರ ಸಮಾಜ ಖಂಡಿಸಿದೆ. ಮಹಿಳಾ ಸಿಬ್ಬಂದಿ ಮೇಲೆ ಇತ್ತೀಚೆಗೆ ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿವೆ ಎಂದು ಐ.ಎಂ.ಎ ರಾಮನಗರ-ಚನ್ನಪಟ್ಟಣ ಶಾಖೆಯ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.
ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಲೈಂಗಿಕ ಹಿಂಸೆ ಮತ್ತು ಕೊಲೆಗಳಿಂದ ರಕ್ಷಿಸಲು ತಕ್ಷಣವೇ ಸರ್ಕಾರಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಎಲ್ಲ ಕೆಲಸದ ಸ್ಥಳಗಳಲ್ಲಿ, ವಿಶೇಷವಾಗಿ ಆರೋಗ್ಯ ಸೇವಾ ಸ್ಥಳಗಳಲ್ಲಿ, ಸಮಗ್ರ ಭದ್ರತಾ ಕ್ರಮ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದರು.
ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಕಡ್ಡಾಯ ಭದ್ರತಾ ಪ್ರೋಟೋಕಾಲ್‌ಗಳನ್ನು ಸ್ಥಾಪಿಸಿ, ತರಬೇತಿದಾರ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವುದು, ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವುದು ಮತ್ತು ತಡರಾತ್ರಿ ಸಮಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸುರಕ್ಷಿತ ಸೌಲಭ್ಯ ಒದಗಿಸಬೇಕು. ಆರೋಗ್ಯ ಕಾರ್ಯಕರ್ತರ ಗೌರವ ಮತ್ತು ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರ ಮೇಲೆ ಹಿಂಸೆ ಮಾಡುವುದು ಹೇಗೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂಬುದರ ಕುರಿತು ರಾಷ್ಟ್ರಮಟ್ಟದ ಜಾಗೃತಿ ಅಭಿಯಾನ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯ ಸ್ಥಳದ ಹಿಂಸೆಗೆ ಒಳಗಾಗುವವರಿಗೆ ಸಮಾಲೋಚನಾ ಸೇವೆಗಳು, ಕಾನೂನು ಸಹಾಯ, ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದರು.
ವೈದ್ಯಕೀಯ ಸಮುದಾಯವು ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಿದೆ. ಆದರೆ ಅವರ ವೃತ್ತಿಪರರ ಭದ್ರತೆ ಮತ್ತು ಸುರಕ್ಷತೆ ಹೆಚ್ಚು ಮುಖ್ಯ. ಈ ತುರ್ತು ವಿಚಾರಗಳನ್ನು ಪರಿಹರಿಸಲು ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಮುಂದಾಗಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ರಾಮನಗರ-ಚನ್ನಪಟ್ಟಣ ಶಾಖೆಯ ಪದಾಧಿಕಾರಿಗಳು ಮನವಿ ಮಾಡಿದರು.
ಭಾರತೀಯ ವೈದ್ಯಕೀಯ ಸಂಘದ ರಾಮನಗರ-ಚನ್ನಪಟ್ಟಣ ಅಧ್ಯಕ್ಷ ಡಾ.ಸಂಪಂಗಿ ರಾಮಯ್ಯ, ಕಾರ್ಯದರ್ಶಿ ಡಾ.ಮಧುಸೂಧನ್, ಖಜಾಂಚಿ ಡಾ.ಪರಿಮಳಾ, ವೈದ್ಯರಾದ ಡಾ.ಶ್ರೀಧರ್, ಡಾ.ಮಲವೇಗೌಡ, ಡಾ.ಗಿರಿಸ್ವಾಮಿ, ಡಾ.ಶಿವಕುಮಾರ್, ಡಾ.ಶೈಲಜ, ಡಾ.ಪದ್ಮಾವತಿ, ಡಾ.ನಟರಾಜ್ ಇದ್ದರು.