ಅಪರಾಧ ತಡೆಗೆ ಮುನ್ನೆಚ್ಚರಿಕೆವಹಿಸಿ: ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಕಿವಿಮಾತು

2
Published on

ಆನೇಕಲ್: ಅಪರಾಧ ನಡೆದ ನಂತರ ತನಿಖೆ ಮಾಡುವುದಕ್ಕಿಂತ ಅಪರಾಧವೇ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಹೇಳಿದರು.

ತಾಲೂಕಿನ ಬೊಮ್ಮಸಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದರು. ಕೈಗಾರಿಕಾ ಪ್ರದೇಶದಲ್ಲಿ ನಡೆಯುವ ಅಕ್ರಮ ತಡೆಯುವ ನಿಟ್ಟಿನಲ್ಲಿ ಜನ ವಿರಳ ಪ್ರದೇಶ ಹಾಗೂ ಹೆಚ್ಚು ಮಹಿಳೆಯರು ಕೆಲಸ ಮಾಡುವ ಪ್ರದೇಶದಲ್ಲಿ ಬೆಳಗ್ಗೆ ಹಾಗೂ ಸಂಜೆ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಈ ಭಾಗದಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ಎಚ್ಚರಿಕೆ ವಹಿಸಬೇಕು. ಅಗತ್ಯವಿದ್ದಲ್ಲಿ ಕೈಗಾರಿಕಾ ಉದ್ಯಮಿಗಳ ಸಹಕಾರ ಪಡೆಯಬಹುದು ಎಂದರು.

ಪೊಲೀಸರು ಎಂದರೆ ಅಪರಾಧಿಗಳಿಗೆ ಭಯ ಇರಬೇಕು. ಯಾವುದೇ ದುಷ್ಟ ಶಕ್ತಿಗಳಿದ್ದರೂ ಅವುಗಳನ್ನು ಮಟ್ಟ ಹಾಕಲು ಸ್ಥಳೀಯ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಸಿಸಿಟಿವಿ ದುರಸ್ತಿ: ಕೈಗಾರಿಕಾ ಪ್ರದೇಶಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮಾಡಿದಾಗ ಸಮಾಜಘಾತುಕ ಶಕ್ತಿ ಬಗ್ಗು ಬಡಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿರುವ 400ಕ್ಕೂ ಹೆಚ್ಚು ಸಿಸಿಟಿವಿಗಳನ್ನು ದುರಸ್ತಿ ಮಾಡಬೇಕು. ಹಾಗೆಯೇ ಕೆಲವು ಆಂತರಿಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪೊಲೀಸರ ಜತೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಐಜಿಪಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ಎಂ.ಎಲ್. ಪುರುಷೋತ್ತಮ್ ಮಾತನಾಡಿ, ಉದ್ಯಮಿಗಳು ಹಾಗೂ ಸ್ಥಳೀಯರು ಸಾಕಷ್ಟು ಸಮಸ್ಯೆ ಹೇಳಿಕೊಂಡಿದ್ದು, ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದ ಹೇಳಿದರು. ಡಿವೈಎಸ್‌ಪಿ ಮಲ್ಲೇಶ್ ಮಾತನಾಡಿ, ಈ ಭಾಗದ ಕೈಗಾರಿಕೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕಾದರೆ ಕೈಗಾರಿಕೋದ್ಯಮಿಗಳ ಸಹಕಾರ ಕೂಡ ಮುಖ್ಯವಾಗಿದೆ ಎಂದರು.

ಕೈಗಾರಿಕಾ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ರಾತ್ರಿ ಪೂರ್ತಿ ಸೇವೆ ಒದಗಿಸುತ್ತಿರುವ ಕಾರಣ ಗಸ್ತು ಸೇವೆ ಹೆಚ್ಚಿಸಬೇಕು ಎಂದು ಪೆಟ್ರೋಲ್ ಬಂಕ್ ಮಾಲೀಕ ಉದಯ್ ಮನವಿ ಮಾಡಿದರು.

ಕೈಕಾರಿಕಾ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳಿಂದ ರಾತ್ರಿ ಸಮಯದಲ್ಲಿ ಡೀಸೆಲ್ ಕಳ್ಳತನ ಹೆಚ್ಚಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಹೆಚ್ಚಿನ ಗಸ್ತು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ನಿವಾಸಿ ಪ್ರದೀಪ್ ಮನವಿ ಮಾಡಿದರು.

ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಾರ್ಯದರ್ಶಿ ನರೇಂದ್ರ ಕುಮಾರ್, ಸಂಘದ ಸದಸ್ಯರಾದ ಅನಿಲ್ ಹರಿದಾಸ್, ನೀಲಕಂಠಯ್ಯ, ಕೃಷ್ಣಮೂರ್ತಿ, ಅಜಯ್ ಭಾರದ್ವಾಜ್, ಮಹದೇವ್, ಕೆ.ವಿಶ್ವನಾಥ್, ಸುದರ್ಶನ್, ಸಂಜೀವ್ ದಾವಂತ್, ರಾಜಶೇಖರ್, ಶಿವಕುಮಾರ್, ನಾಗರಾಜ್ ಶೆಟ್ಟಿ, ಅಶ್ವತ್ಥ್, ಎಸ್.ಅಣ್ಣಾಜಿ, ಸಂಪತ್ ಕುಮಾರ್, ಮುರಳೀಧರ್ ಮತ್ತಿತರರು ಇದ್ದರು.

ಅಪರಾಧ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿರುವುದರಿಂದ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ. ಆದ್ದರಿಂದ ಕೈಗಾರಿಕಾ ಪ್ರದೇಶದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಆದಷ್ಟು ಬೇಗ ಕಾರ್ಯಗತವಾಗಬೇಕು .
ಮಂಜುನಾಥ್
| ಸಿಐಇ ಮಹೇಂದ್ರ ಆಟೋ ಮೊಟೀವ್ ಲಿಮಿಟೆಡ್


ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಪದೇ ಪದೆ ಅಪಘಾತ ಹೆಚ್ಚಾಗುತ್ತಿವೆ. ಆದ್ದರಿಂದ ರಸ್ತೆಯಲ್ಲಿ ಉಬ್ಬು ಹಾಕುವ ಮೂಲಕ ಅಪಘಾತದಿಂದ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಬೇಕು.

| ಸುದರ್ಶನ್ ಕಾರ್ಲಲ್ ಜೈಸ್ ಕಂಪನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net