

ಪಡುಬಿದ್ರಿ: ಮೂಲ ಸೌಕರ್ಯಕ್ಕೆ ಒತ್ತು ನೀಡಿ ಸಮಗ್ರ ಗ್ರಾಮೀಣಾಭಿವೃದ್ಧಿಯಲ್ಲಿ ಮುನ್ನಡೆಯಲಿರುವ ಬೆಳಪು ಗ್ರಾಮಕ್ಕೆ ವಿಶೇಷ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಆಗಮಿಸಲಿದೆ ಎಂದು ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಪಂಚಾಯತ್‌ರಾಜ್ ಇಲಾಖಾ ಕಾರ್ಯದರ್ಶಿ ಹಾಗೂ ಅಧಿಕಾರಿಗಳೊಂದಿಗೆ ದೆಹಲಿಯಲ್ಲಿ ಗುರುವಾರ ಆಯೋಜಿಸಿದ್ದ ಆನ್‌ಲೈನ್ ಸಂವಾದದಲ್ಲಿ ಪಾಲ್ಗೊಂಡಿದ್ದ ದೇವಿಪ್ರಸಾದ್ ಶೆಟ್ಟಿ ಮಂಡಿಸಿದ ಬೆಳಪು ಗ್ರಾಮದ ಸಮಗ್ರ ವರದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಅಧ್ಯಯನಕ್ಕಾಗಿ ತಂಡವನ್ನು ಕಳುಹಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವದೆಹಲಿಯ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ನ.8ರಂದು ನಡೆಯುವ 2ನೇ ಸುತ್ತಿನ ಚರ್ಚೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿಯ ಸಂವಾದದಲ್ಲಿ ಇಲಾಖಾ ಕಾರ್ಯದರ್ಶಿ ಕುಶವಂತ ಸೇಠಿ, ಜಂಟಿ ಕಾರ್ಯದರ್ಶಿ ರೇಖಾ ಭಾಗವತ್, ಹಿಮಾಚಲಪ್ರದೇಶ ಪ್ರತಿನಿಧಿ ರಾಜ್‌ಕುಮಾರ್, ಪಂಜಾಬ್ ಪ್ರತಿನಿಧಿ ಪಲ್ಲವಿ ಠಾಕೂರ್, ಉತ್ತರಾಖಂಡದ ಬಲವಂತ್ ಸಿಂಗ್ ರಾವತ್, ಹರಿಯಾಣದ ಪ್ರವೀಣ್ ಕೌರ್ ದೇಶದ ಪ್ರತಿನಿಧಿಗಳಾಗಿ ಆಹ್ವಾನಿತರಾಗಿ ಭಾಗವಹಿಸಿದ್ದರು. ಬೆಳಪು ಪಿಡಿ.ಒ ಹೆಚ್.ಆರ್.ರಮೇಶ್, ಸಂಪನ್ಮೂಲ ವ್ಯಕ್ತಿ ಜಯವಂತ್ ರಾವ್, ಕಾರ್ಯದರ್ಶಿ ಸುಮಿತ್ರಾ ಆಚಾರ್ಯ ಉಪಸ್ಥಿತರಿದ್ದರು.
ಗ್ರಾಮಸ್ವರಾಜ್ ವ್ಯವಸ್ಥೆ ಇನ್ನಷ್ಟು ಬಲಕ್ಕೆ ಆಗ್ರಹ: ದೇಶದ ಆಯ್ದ 4 ಜನ ಪಂಚಾಯಿತಿ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಬೆಳಪು ಗ್ರಾಪಂನಲ್ಲಿ ಆನ್‌ಲೈನ್ ಸಂವಾದದಲ್ಲಿ ಅನಿಸಿಕೆ ವ್ಯಕ್ತಪಡಿಸಿದ ದೇವಿಪ್ರಸಾದ್, ಗ್ರಾಪಂಗಳಲ್ಲಿರುವ ಲೋಪದೋಷಗಳ ಬಗ್ಗೆ ವಿವರವಾಗಿ ತಿಳಿಸಿದರು. ಪಂಚಾಯಿತಿಗಳಿಗೆ ಪರಮಾಧಿಕಾರ ನೀಡುವುದು. ಗ್ರಾಮಸಭೆಗಳ ಅಧಿಕಾರ ಮೊಟಕುಗೊಳಿಸದಿರುವುದು. ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡುವುದು. ಪಂಚಾಯಿತಿಗಳಿಗೆ ಅನುಷ್ಠಾನಗೊಳ್ಳುವ ಎಲ್ಲ ಇಲಾಖೆಯ ಕಾಮಗಾರಿಗಳಿಗೂ ನೇರ ಅನುದಾನ ಒದಗಿಸುವುದು. ಮೇಲ್‌ಸ್ತರ ಜನಪ್ರತಿನಿಧಿಗಳ ಹಸ್ತಕ್ಷೇಪ ಕಡಿತಗೊಳಿಸುವುದು. ಪಂಚಾಯಿತಿ ಸಿಬ್ಬಂದಿ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸುವುದು. ಗ್ರಾಮಸ್ವರಾಜ್ ವ್ಯವಸ್ಥೆಗೆ ಇನ್ನಷ್ಟು ಬಲ ನೀಡುವಂತೆ ಒತ್ತಾಯಿಸಿರುವುದಾಗಿ ವಿವರಿಸಿದ್ದಾರೆ.