

ಹುಬ್ಬಳ್ಳಿ: ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಶನಿವಾರ ಸಂಜೆ ತಾಲೂಕಿನ ಗೋಕುಲ ಹಾಗೂ ರಾಯನಾಳ ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲಿಸಿದರು.
ಗೋಕುಲ ಗ್ರಾಮದ ರೈತರಾದ ನಿಂಗಪ್ಪ ಕದಂ, ಬಸಪ್ಪ ಮ್ಯಾಗೇರಿ ಮತ್ತು ರೈತ ಮಹಿಳೆ ರತ್ನವ್ವ ಪಾಟೀಲ ಅವರ ಜಮೀನುಗಳಲ್ಲಿ ಗೋವಿನಜೋಳ ಹಾಗೂ ಸೋಯಾಬೀನ್ ಬೆಳೆ ಹಾನಿಯನ್ನು ತಂಡವು ಪರಿಶೀಲಿಸಿತು. ರಾಯನಾಳ ಗ್ರಾಮದ ರೈತ ಶಿವನಗೌಡ ಪಾಟೀಲ್ ಅವರ ಜಮೀನಿನಲ್ಲಿ ಮಳೆ ಕೊರತೆಯಿಂದ ಗೋವಿನ ಜೋಳ ಬೆಳೆ ಬೆಳವಣಿಗೆ ಆಗದೇ ಇರುವುದನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿತು.
ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳಾದ ಅಜಿತ್ಕುಮಾರ್ ಸಾಹು, ಡಾ. ಜೆ. ಪೊನ್ನುಸ್ವಾಮಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೃಷಿ ಆಯುಕ್ತ ವೈ.ಎಸ್. ಪಾಟೀಲ, ಶಾಸಕ ಎನ್.ಎಚ್. ಕೊನರಡ್ಡಿ, ಜಿಪಂ ಸಿಇಒ ಸ್ವರೂಪಾ ಟಿ.ಕೆ., ಕೃಷಿ ಇಲಾಖೆಯ ಅಧಿಕಾರಿಗಳಾದ ಡಾ: ಕಿರಣಕುಮಾರ, ಡಾ. ಜಯಶ್ರೀ ಹಿರೇಮಠ, ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ, ತಹಶೀಲ್ದಾರ ಪ್ರಕಾಶ ನಾಶಿ, ಕೆ.ಆರ್. ಪಾಟೀಲ, ರಾಯನಾಳ ಗ್ರಾಪಂ ಅಧ್ಯಕ್ಷ ಆರ್.ಜಿ. ಮೇಟಿ, ದೇವರಗುಡಿಹಾಳ ಗ್ರಾಪಂ ಅಧ್ಯಕ್ಷ ಮುಲ್ಲಾ, ಇತರರು ಇದ್ದರು.