

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿರಿಯ ಕವಿ, ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ `ವಿದಿಶಾ ಪ್ರಹಸನ' ಅನುವಾದಿತ ಕೃತಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕವಿ, ಅನುವಾದಕ, ಅಂಕಣಕಾರರಾಗಿ ಚಿರಪರಿಚಿತರಾಗಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಧಾರವಾಡದಲ್ಲಿ 1939ರ ನ. 3ರಂದು ಜನಿಸಿದರು. ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಿಂದಿ ಸ್ನಾತಕೋತ್ತರ ಪದವಿ ಪೂರೈಸಿದರು. ನಂತರ ಪಿಎಚ್.ಡಿ ಪದವಿ ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. 1966ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ಸೇರಿ 1999ರಲ್ಲಿ ನಿವೃತ್ತರಾಗಿದ್ದಾರೆ.
ನಿವೃತ್ತಿಯ ನಂತರ ಕನ್ನಡ, ಹಿಂದಿ ಸಾಹಿತ್ಯ ಕೃಷಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅವರ ಅನೇಕ ಕಾವ್ಯ, ಕಥೆ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ವಿಮರ್ಶೆ, ವ್ಯಕ್ತಿಚಿತ್ರ ಸಂದರ್ಶನ ಹಾಗೂ ಅನುವಾದಿತ ಕೃತಿಗಳು ಜನಮನ್ನಣೆ ಗಳಿಸಿವೆ. ಹಿಂದಿ, ಮರಾಠಿ, ಉರ್ದು, ಸಂಸ್ಕೃತ ಭಾಷೆಯ 11 ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಳಿದಾಸ ವಿರಚಿತ ಸಂಸ್ಕೃತದ `ಮಾಲವಿಕಾಗ್ನಿಮಿತ್ರಂ' ನಾಟಕವನ್ನು ಕನ್ನಡಕ್ಕೆ `ವಿದಿಶಾ ಪ್ರಹಸನ' ಎಂದು ಅನುವಾದಿಸಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ.
`ವಿಜಯವಾಣಿ'ಯೊಂದಿಗೆ ಮಾತನಾಡಿದ ಅವರು, ಕಾಳಿದಾಸನ `ಮಾಲವಿಕಾಗ್ನಿಮಿತ್ರಂ' ಮೂಲ ನಾಟಕವನ್ನು ಹಾಗೆ ಇಟ್ಟುಕೊಂಡು ಅದರಲ್ಲಿನ ಹಾಡುಗಳನ್ನು ಬೆಳೆಸಿದ್ದೇನೆ. ವಿದಿಶಾ ಎಂಬುದು ನಾಟಕ ನಡೆಯುವ ರಾಜಧಾನಿಯ ಹೆಸರು. ಅಪತಾ ತಪರಾ ಎಂಬೆರಡು ಪಾತ್ರಗಳನ್ನು ಹೆಚ್ಚುವರಿಯಾಗಿ ಸೇರಿಸಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಸಂತೋಷ ಮತ್ತು ಅಭಿಮಾನದ ಸಂಗತಿ ಎಂದರು.