

ಶಿವಮೊಗ್ಗ: ಭದ್ರಾವತಿಯ ಆಕಾಶವಾಣಿ ಎಫ್‌ಎಂ ರೇಡಿಯೋ ಆರಂಭಿಸಲು ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ. ಆದ್ಯತೆ ಮೇರೆಗೆ ಶಿವಮೊಗ್ಗದ ದೂರದರ್ಶನ ಗೋಪುರದ ಮೇಲೆ 10 ಕಿಲೋ ವ್ಯಾಟ್ ಟ್ರಾನ್ಸ್‌ಮೀಟರ್ ಅಳವಡಿಸುವುದಕ್ಕೆ ಪ್ರಸಾರ ಭಾರತಿ ಅನುಮತಿ ನೀಡಿದ್ದು ಡಿಸೆಂಬರ್‌ನೊಳಗೆ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಕಳೆದ ಲೋಕಸಭಾ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಎಫ್‌ಎಂ ರೇಡಿಯೋ ತೆರೆಯುವುದಾಗಿ ಭರವಸೆ ನೀಡಲಾಗಿತ್ತು. ಹಾಲಿ ಭದ್ರಾವತಿಯಲ್ಲಿ 1 ಕಿಲೋ ವ್ಯಾಟ್ ಟ್ರಾನ್ಸ್‌ಮೀಟರ್ ಇದ್ದು 100 ಮೀಟರ್ ಎತ್ತರದ ಗೋಪುರವಿದೆ. ಇದೀಗ ಆ ಸಾಮರ್ಥ್ಯವನ್ನು 10 ಕಿಲೋ ವ್ಯಾಟ್‌ಗೆ ಹೆಚ್ಚಿಸಲಾಗಿದೆ. 10 ಕೋಟಿ ರೂ. ಅನುದಾನ ಕೂಡ ಮಂಜೂರಾಗಿದೆ ಎಂದು ಹೇಳಿದರು.
ಭದ್ರಾವತಿಯ ಆಕಾಶವಾಣಿಯನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುತ್ತಿಲ್ಲ. ಬದಲಾಗಿ 10 ಕಿಲೋ ವ್ಯಾಟ್‌ನ ಟ್ರಾನ್ಸ್‌ಮೀಟರ್ ಅನ್ನು ಮಾತ್ರ ಸಹ್ಯಾದ್ರಿ ಕಾಲೇಜು ಎದುರಿನ ದೂರದರ್ಶನ ಟವರ್‌ಗೆ ಅಳವಡಿಕೆ ಮಾಡಲಾಗುವುದು. ಇದರಿಂದ ಶಿವಮೊಗ್ಗ, ಉಡುಪಿ, ಮಂಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿ ಇಡೀ ಮಧ್ಯ ಕರ್ನಾಟಕಕ್ಕೆ ಇದರಿಂದ ಪ್ರಯೋಜನ ದೊರಕಲಿದೆ ಎಂದು ತಿಳಿಸಿದರು.
ದೇಶದಲ್ಲಿ 10 ಕಡೆ ಮಾತ್ರ 10 ಕಿಲೋ ವ್ಯಾಟ್‌ನ ಟ್ರಾನ್ಸ್‌ಮೀಟರ್ ಅಳವಡಿಸಲು ಅನುಮತಿ ನೀಡಲಾಗಿದೆ. ಅದರಲ್ಲಿ ಕರ್ನಾಟಕದಲ್ಲಿ ಶಿವಮೊಗ್ಗಕ್ಕೆ ಅವಕಾಶ ದೊರೆತಿದೆ. ಡಿಸೆಂಬರ್‌ನೊಳಗೆ ಟೆಂಡರ್ ಕರೆದು ಯಂತ್ರಗಳನ್ನು ಖರೀದಿಸಿ ಯೋಜನೆ ಕಾರ್ಯಾರಂಭಗೊಳಿಸಲು ಒತ್ತು ನೀಡಲಾಗುವುದು. ಈಗಾಗಲೇ ಸರ್ಕಾರದ ಮಟ್ಟದಲ್ಲೇ ನಾಲ್ಕೈದು ಅಧಿಕಾರಿಗಳ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಕೂಡ ನಡೆದಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಶ್ರೀನಾಥ್, ಶಿವರಾಜ್, ಮುಖಂಡರಾದ ಮಾಲತೇಶ್, ಸಂತೋಷ್ ಬಳ್ಳೇಕೆರೆ, ಚಂದ್ರಶೇಖರ್, ನವೀನ್ ಹೆದ್ದೂರ್, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.