

ತುಮಕೂರು: ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರೆ ತುಮಕೂರಿನಲ್ಲಿ ಮಾಡಿ ಇಲ್ಲವಾದರೆ ಬೆಂಗಳೂರಿನ ಹಳೇಯ ಎಚ್ಎಎಲ್ ಏರ್ಪೋರ್ಟ್ನಲ್ಲೇ ಮಾಡಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಅಂತರಾಷ್ಟ್ರೀಯ ಮಾನ ನಿಲ್ದಾಣ ಬಗ್ಗೆ ನಾನು ಈಗಾಗಲೇ ಎರಡು ಬಾರಿ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ. ಅದನ್ನು ಬಹಿರಂಗ ಪಡಿಸುವುದಿಲ್ಲ. ತಮಿಳುನಾಡು ಸರ್ಕಾರವು ಹೊಸೂರು ಬಳಿ ವಿಮಾನ ನಿಲ್ದಾಣ ನಿರ್ಮಿಸಲು ಹೊರಟಿರುವುದರಿಂದ ನನ್ನ ಮೊದಲ ಆದ್ಯ ತುಮಕೂರು&ನೆಲಮಂಗಲ ಮಧ್ಯದಲ್ಲಿ ಎಲ್ಲಾದರು ಒಂದು ಕಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಸೂಕ್ತ ಎಂಬುದು ನನ್ನ ಭಾವನೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬೆಂಗಳೂರಿನ ಹಳೇಯ ಎಚ್ಎಎಲ್ ಏರ್ಪೋರ್ಟ್ನೇ ಅಭಿವೃದ್ಧಿ ಪಡಿಸುವುದು ಸೂಕ್ತ. ಅದಕ್ಕೆ ಹೆಚ್ಚು ಹಣ ಬೇಕಿರುವುದಿಲ್ಲ. ತಾಂತ್ರಿಕವಾಗಿ ಸೂಕ್ತವಾಗಿರುವುದರಿಂದ ಅಲ್ಲಿ ಎರಡನೇ ಏರ್ಪೋರ್ಟ್ ಮಾಡಬೇಕೆಂಬುದು ನನ್ನ ಮನವಿ. ಇಡೀ ಭಾರತ ದೇಶದಲ್ಲಿ ಬೆಂಗಳೂರು ಹೊರತುಪಡಿಸಿದರೇ ನಾಗಲೋಟದಲ್ಲಿ ಬೆಳೆಯುತ್ತಿರುವುದು ತುಮಕೂರು ಮಾತ್ರ. ಹಾಗಾಗಿ, ತುಮಕೂರಿಗೆ ಹೊಂದಿಕೊಂಡಿರುವ ಡಾಬಸಪೇಟೆ, ನೆಲಮಂಗಲ ಮಧ್ಯೆ ಮಾಡಿದರೆ ನಮ್ಮದೇನು ತಕರಾರರು ಇಲ್ಲ. ಆದರೆ, ಅದನ್ನು ಬಿಟ್ಟು ಇನ್ನೆಲ್ಲೋ ಮಾಡುವುದು ಸೂಕ್ತವಲ್ಲ. ರಾಜ್ಯ ಸರ್ಕಾರಕ್ಕೆ ಇನ್ನೆರಡು ದಿನದೊಳಗೆ ಪತ್ರ ಬರೆಯುವೆ ಎಂದು ತಿಳಿಸಿದರು. ಇದೇವೇಳೆ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರ ನಿವಾಸಕ್ಕೆ ತೆರಳಿ ಸೋಮಣ್ಣ ಹೂಗುಚ್ಛ ನೀಡಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ.