ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ, ಸಿಎಂ ಒಂದು ನಿಮಿಷವೂ ಹುದ್ದೆಯಲ್ಲಿರಲು ಅರ್ಹರಲ್ಲ

IMG_20240924_200747_806.jpg
Published on

ಹುಬ್ಬಳ್ಳಿ: ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಅನಪೇಕ್ಷಿತ ಪ್ರಭಾವ ಬೀರಿದ್ದಲ್ಲದೆ, ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಒಂದು ನಿಮಿಷವೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯದೇ ರಾಜೀನಾಮೆ ನೀಡಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಬಯಲಾಗಿದೆ. ಇನ್ನೂ ರ್ಕುಚಿಗೆ ಅಂಟಿಕೊಂಡಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

ಜನಸಾಮಾನ್ಯರ ರಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಯೇ ಹಿಂದುಳಿದವರು, ಬಡವರನ್ನು ವಂಚಿಸಿದ್ದಾರೆ. ಇದು ನಿಜಕ್ಕೂ ಅಕ್ಷಮ್ಯ. ಸಾಮಾನ್ಯರು ನಿಯಮ ಮೀರಿ ಸೌಲಭ್ಯ ಪಡೆದರೆ ಕಾನೂನು ಸಹಿಸುವುದಿಲ್ಲ. ಇನ್ನು ಎಲ್ಲ ಕಾನೂನು ಅರಿತ ಸಿಎಂ ಹೀಗೆ ವರ್ತಿಸಿದರೆ ಹೇಗೆ ? ಎಂದು ಜೋಶಿ ಪ್ರಶ್ನಿಸಿದರು.

ನ್ಯಾಯಾಲಯದ ತೀರ್ಪಿನಲ್ಲಿ "ಫಲಾನುಭವಿ ಅಪರಿಚಿತೆಯಲ್ಲ' ಅರ್ಜಿದಾರರ (ಸಿಎಂ ಸಿದ್ದರಾಮಯ್ಯ) ಪತ್ನಿ ಎಂದು ಉಲ್ಲೇಖಿಸಿದೆ. ಮೂಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ವಗೆ ಅನುಮತಿ ನೀಡಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮೇಲ್ನೋಟಕ್ಕೆ ಅಧಿಕಾರ ದುರುಪಯೋಗ ಎಂಬುದು ಗೊತ್ತಾಗುತ್ತದೆ. ಕೋರ್ಟ್ ಇನ್ನೇನು ಹೇಳಬೇಕು ಇವರಿಗೆ? ಎಂದು ಸಚಿವ ಜೋಶಿ ಟೀಕಿಸಿದರು.

ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಡಿಎನ್ಎದಲ್ಲೇ ಇದೆ. ಸಿಎಂ ಸಿದ್ದರಾಮಯ್ಯ ಅವರೂ ಇದಕ್ಕೆ ಹೊರತಾಗಿಲ್ಲ. ನಿಯಮಗಳನ್ನು ಗಾಳಿಗೆ ತೂರಿದ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದರು.

ಈ ಹಿಂದೆ ಬಿಎಸ್ ವೈ ಸಿಎಂ ಆಗಿದ್ದಾಗ ಏನು ಹೇಳಿದ್ದೀರಿ ಎಂಬುದನ್ನು ಸಿದ್ದರಾಮಯ್ಯ ಅವರು ನೆನಪಿಸಿಕೊಳ್ಳಬೇಕು ಎಂದೂ ಜೋಶಿ ತಿರುಗೇಟು ನೀಡಿದ್ದಾರೆ.

ರಾಜ್ಯಪಾಲರ ಕ್ಷಮೆ ಕೇಳಿ:
ಸಿಎಂ ಸೇರಿದಂತೆ ಕಾಂಗ್ರೆಸ್ಸಿಗರು ರಾಜ್ಯಪಾಲರನ್ನು ಅವಹೇಳನ, ಅಪಮಾನ ಮಾಡಿದ್ದರು. ಪ್ರತಿಭಟನೆ ವೇಳೆ ಕೆಲವರು ರಾಜ್ಯಪಾಲರ ಭಾವಚಿತ್ರಕ್ಕೆ ಹೊಡೆದು ತೀರಾ ಅನುಚಿತ ವರ್ತನೆ ತೋರಿದ್ದರು. ದಲಿತ ನಾಯಕರ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಕ್ಷಣ ರಾಜ್ಯಪಾಲರ ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದರು.

ವಿದೇಶಕ್ಕೆ ಹೋಗಿ ಡೋಂಗಿ ನೈತಿಕತೆ ತೋರುವ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರು ಮೊದಲು ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಿ ಎಂದು ಜೋಶಿ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net