ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಿರ್ಬಂಧ ತೆರವು

central
Published on

ಮಂಗಳೂರು: ಕೋವಿಡ್-19 ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಿಷೇಧಿಸಿ ಜಿಲ್ಲಾಡಳಿತ ಆ.18ರಂದು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕಳೆದ ಮಾರ್ಚ್‌ನಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಹೇರಲಾಗಿದ್ದ ನಿಷೇಧವನ್ನು ಹೈಕೋರ್ಟ್‌ನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಿಂಪಡೆದ ಕಾರಣ ತಾತ್ಕಾಲಿಕವಾಗಿ ಎಪಿಎಂಸಿಗೆ ಸ್ಥಳಾಂತರಗೊಂಡಿದ್ದ ಸೆಂಟ್ರಲ್ ಮಾರುಕಟ್ಟೆಯ ಕೆಲ ವ್ಯಾಪಾರಸ್ಥರು ಆ.13ರಿಂದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಮತ್ತೆ ವ್ಯಾಪಾರ ಆರಂಭಿಸಿದ್ದರು. ಇದರ ಬೆನ್ನಲ್ಲೇ ಆ.18ರಂದು ಮತ್ತೆ ಇಲ್ಲಿ ವ್ಯಾಪಾರ ವಹಿವಾಟು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿ ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೇಂದ್ರ ಸರ್ಕಾರವೇ ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು, ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಿದೆ. ಕೋವಿಡ್ ಹೆಸರಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವುದು ಸಮಂಜಸವಲ್ಲ ಎಂದು ಉಲ್ಲೇಖಿಸಿ ಜಿಲ್ಲಾಧಿಕಾರಿ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ವ್ಯಾಪಾರಿಗಳ ಪರ ವಕೀಲ ಅಬ್ದುಲ್ ಲತೀಫ್ ಬಡಗಣ್ಣೂರು ತಿಳಿಸಿದ್ದಾರೆ.

ಪರಿಹಾರಕ್ಕೆ ಮನವಿ: ಜಿಲ್ಲಾಧಿಕಾರಿ ಆದೇಶದ ಬಳಿಕ ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದು, ಆ.18ರಿಂದ ಅನ್ವಯವಾಗುವಂತೆ ವ್ಯಾಪಾರಸ್ಥರಿಗೆ ದಿನವೊಂದಕ್ಕೆ ತಲಾ 3,000 ರೂ.ನಂತೆ ಸರ್ಕಾರ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾಗಿ ವಕೀಲ ಅಬ್ದುಲ್ ಲತೀಫ್ ತಿಳಿಸಿದ್ದಾರೆ.

ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡ್ಝ್ಠ ವುದಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆ.18ರಂದು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ನಲ್ಲಿ ಮಧ್ಯಂತರ ತಡೆಯಾಜ್ಞೆ ಸಿಕ್ಕಿದೆ. ಆದೇಶದ ಪ್ರತಿ ಲಭಿಸಿದ ಕೂಡಲೇ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಲಿದ್ದೇವೆ. ಅಹಮ್ಮದ್ ಬಾವ ಗೌರವಾಧ್ಯಕ್ಷ, ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net