ಮಾರ್ಕೆಟ್ ವ್ಯಾಪಾರಸ್ಥರು ಬೈಕಂಪಾಡಿಗೆ ಶಿಫ್ಟ್?

market new
Published on

ಮಂಗಳೂರು: ಬೈಕಂಪಾಡಿಯ ಎಪಿಎಂಸಿ ಯಾರ್ಡಿಗೆ ಸೆಂಟ್ರಲ್ ಮಾರ್ಕೆಟ್‌ನ ಸಗಟು ವ್ಯಾಪಾರಸ್ಥರು ಸ್ಥಳಾಂತರಗೊಳ್ಳಬೇಕು ಎನ್ನುವ ಬಿಗು ನಿಲುವಿಗೆ ಪೂರಕವಾಗಿ ಕೆಲವೊಂದು ಪೂರಕ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಪಟ್ಟು ಸಡಿಲಿಸುವ ಸೂಚನೆ ಕಂಡುಬಂದಿದೆ.

ಒಂದೊಮ್ಮೆ ಜಿಲ್ಲಾಡಳಿತ ಪಟ್ಟು ಸಡಿಲಿಸದಿದ್ದರೆ ಮುಷ್ಕರ ನಡೆಸುವುದು, ತರಕಾರಿ ಪೂರೈಕೆ ಸ್ಥಗಿತಗೊಳಿಸುವುದಾಗಿ ಹೇಳಿದ್ದ ವ್ಯಾಪಾರಿಗಳು ಈಗ ಸ್ಥಳಾಂತರಕ್ಕೆ ಸಜ್ಜಾಗುತ್ತಿದ್ದಾರೆ.

ಸುತಾರಾಂ ಸ್ಥಳಾಂತರಗೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದ ವ್ಯಾಪಾರಿಗಳಿಗೆ ಮಣೆ ಹಾಕದಿರಲು ನಿಶ್ಚಯಿಸಿದ ಜಿಲ್ಲಾಡಳಿತ ಸೋವವಾರ ಹೊರ ಜಿಲ್ಲೆಗಳಿಂದ ಬಂದ ತರಕಾರಿ ಲಾರಿಗಳನ್ನು ಸೆಂಟ್ರಲ್ ಮಾರುಕಟ್ಟೆಗೆ ಹೋಗದಂತೆ ಪಂಪ್‌ವೆಲ್‌ನಲ್ಲೇ ತಡೆದಿದೆ. ಅಲ್ಲದೆ ಬೈಕಂಪಾಡಿಯಲ್ಲಿ ಸಜ್ಜುಗೊಳಿಸಲಾದ ಯಾರ್ಡ್‌ಗೆ ಆಲೂಗಡ್ಡೆ ಹಾಗೂ ಕೆಲವು ತರಕಾರಿಗಳ ಸಂಗ್ರಹವನ್ನು ಬೇರೆ ಮೂಲಗಳ ಮೂಲಕ ತಂದು ಪೇರಿಸಿದೆ.

ಒಂದು ವೇಳೆ ಮಾರುಕಟ್ಟೆ ಸಗಟು ವ್ಯಾಪಾರಸ್ಥರು ತಾವಾಗಿ ಸ್ಥಳಾಂತರಗೊಳ್ಳದೆ ಹೋದರೆ ಸೆಂಟ್ರಲ್ ಮಾರುಕಟ್ಟೆ ತೆರೆಯುವುದೂ ಇಲ್ಲ, ಬದಲಾಗಿ ಪರ್ಯಾಯ ಜನರನ್ನು ಬಳಸಿ ಬೈಕಂಪಾಡಿಯಲ್ಲೇ ಸಗಟು ಪೂರೈಕೆ ಕೈಗೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂಬ ಜಿಲ್ಲಾಡಳಿತದ ಸೂಚನೆಗೆ ಈಗ ವ್ಯಾಪಾರಸ್ಥರು ತುಸು ಮೆದುವಾಗಿದ್ದಾರೆ.

ಎಲ್ಲ ರೀತಿಯ ಸೌಲಭ್ಯ ಹೊಂದಿರುವ ಬೈಕಂಪಾಡಿ ಮಾರುಕಟ್ಟೆ ನಗರದಿಂದ ದೂರವಿದೆ ಎನ್ನುವ ಕಾರಣ ನೀಡಿ ವರ್ತಕರು ಅಲ್ಲಿಗೆ ಹೋಗಲು ಹಿಂದೇಟು ಹಾಕಿದ್ದರು. ಅಲ್ಲಿಗೆ ಬರುವ ಹಮಾಲಿಗಳಿಗೆ ಕಷ್ಟ, ಕೂಲಿಯವರು ಬರುವುದಿಲ್ಲ, ಬರುವ ವರ್ತಕರೆಲ್ಲರಿಗೆ ವಾಹನವಿಲ್ಲ ಎಂಬಿತ್ಯಾದಿ ಕಾರಣವನ್ನೂ ನೀಡಿದ್ದರು.

ವ್ಯಾಪಾರಸ್ಥರಿಗೆ ಪೊಲೀಸರಿಂದ ಎಚ್ಚರಿಕೆ: ಸೆಂಟ್ರಲ್ ಮಾರ್ಕೆಟ್ ವಠಾರದಲ್ಲಿ ಹಣ್ಣು ಹಂಪಲು ತರಕಾರಿ ವ್ಯಾಪಾರ ಮಾಡದಂತೆ ಜಿಲ್ಲಾಡಳಿತದ ಆದೇಶವಿರುವ ಕಾರಣ ಅಲ್ಲಿ ಯಾವುದೇ ವಹಿವಾಟು ನಡೆಸಬಾರದು ಎಂದು ಮಂಗಳೂರು ಉತ್ತರ ಪೊಲೀಸ್ ಇನ್ಸ್‌ಪೆಕ್ಟರ್ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಿಗೆ ತಿಳಿವಳಿಕೆ ಪತ್ರ ನೀಡಿದ್ದಾರೆ. ಏ.2ರಂದು ಜಿಲ್ಲಾಡಳಿತವು ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣದಲ್ಲೇ ಹಣ್ಣು ತರಕಾರಿ ವಹಿವಾಟು ಕೈಗೊಳ್ಳಬೇಕು ಎಂದು ಆದೇಶನೀಡಿದೆ, ಆದರೂ ಕೆಲವು ಸಗಟು, ಚಿಲ್ಲರೆ ಮಾರಾಟಗಾರರು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಕೈಗೊಳ್ಳುತ್ತಿರುವುದು ಕಂಡುಬಂದಿದ್ದು, ಅದು ಮುಂದುವರಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಮುಷ್ಕರ ಮಾಡುವುದಿಲ್ಲ. ನಮ್ಮ ಕೆಲ ವ್ಯಾಪಾರಸ್ಥರು ಬೈಕಂಪಾಡಿಗೆ ಹೋಗಿ ವ್ಯವಸ್ಥೆ ನೋಡಿಕೊಂಡು ಬಂದಿದ್ದಾರೆ. ಮಂಗಳವಾರ ಮತ್ತೆ ಹೋಗುತ್ತಿದ್ದೇವೆ. ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ, ನಮಗೆ ಅಗತ್ಯವಾದ ಸವಲತ್ತುಗಳ ಬಗ್ಗೆ ಮನದಟ್ಟು ಮಾಡಲಿದ್ದೇವೆ. ಸವಲತ್ತುಗಳನ್ನು ನೀಡಿದರೆ ನಾವು ಹೋಗಲು ಸಿದ್ಧ - ಎಂ.ಎಂ.ಕೆ ಮುಸ್ತಾಫ, ಅಧ್ಯಕ್ಷ, ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net