

ಮಂಗಳೂರು: ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಮೂರು ದಿನಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಸಗಟು ವ್ಯಾಪಾರವನ್ನ್ನು ಶುಕ್ರವಾರ ಪುನರಾರಂಭಿಸಲು ತರಕಾರಿ, ಹಣ್ಣು ಸಗಟು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ. ಆದರೆ ಶೇ.50ರಷ್ಟು ವ್ಯಾಪಾರಿಗಳು ಮಾತ್ರ ವ್ಯಾಪಾರ ಮಾಡುವ ಸಾಧ್ಯತೆ ಇದೆ.
ಸೆಂಟ್ರಲ್ ಮಾರುಕಟ್ಟೆಯಲ್ಲೇ ವ್ಯಾಪಾರಕ್ಕಾಗಿ ವ್ಯಾಪಾರಿಗಳು ಮಂಗಳವಾರ ಆಗಮಿಸಿದರೂ ಪೊಲೀಸರನ್ನು ನಿಯೋಜಿಸಿದ್ದ ಮಹಾನಗರ ಪಾಲಿಕೆ ಒಳಪ್ರವೇಶಿಸದಂತೆ ತಡೆದಿತ್ತು. ಆದರೆ ವ್ಯಾಪಾರಿಗಳು ಬೈಕಂಪಾಡಿಯಲ್ಲಿ ವ್ಯಾಪಾರ ಆರಂಭಿಸಿರಲಿಲ್ಲ. ಇದರಿಂದ ಚಿಲ್ಲರೆ ಅಂಗಡಿಗಳಿಗೆ ತರಕಾರಿ, ಹಣ್ಣು ಪೂರೈಕೆಯಾಗದೆ ದರ ಗಗನಕ್ಕೇರಿದೆ.
ಶುಕ್ರವಾರ ಮತ್ತೆ ಸಗಟು ವ್ಯಾಪಾರ ಆರಂಭಗೊಂಡರೂ ಎಲ್ಲ ವ್ಯಾಪಾರಿಗಳು ವಹಿವಾಟು ಆರಂಭಿಸಲು ಆಸಕ್ತಿ ತೋರದೆ ಇರುವುದರಿಂದ ಮಂಗಳೂರಿಗೆ ಕಡಿಮೆ ಪ್ರಮಾಣದಲ್ಲಿ ತರಕಾರಿಗಳು ಬರಲಿದೆ. ಇದರಿಂದ ತರಕಾರಿ ಹಾಗೂ ಹಣ್ಣು ದರ ಒಂದೆರಡು ದಿನ ಯಥಾ ಪ್ರಕಾರ ಇರುವ ಸಾಧ್ಯತೆ ಇದೆ.
ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಪಾಲಿಕೆ ಆದೇಶ ಹೊರಡಿಸಿದೆ. ವ್ಯಾಪಾರಸ್ಥರು ಪಾಲಿಕೆ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆ ತಂದು ಮತ್ತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಪಾಲಿಕೆ ಅವಕಾಶ ನಿರಾಕರಿಸಿದ್ದು, ನೀರು ಹಾಗು ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ತರಕಾರಿ ದರ ಮತ್ತಷ್ಟು ಹೆಚ್ಚಳ: ಮಂಗಳೂರಿನಲ್ಲಿ ತರಕಾರಿ, ಹಣ್ಣುಗಳ ದರ ಬುಧವಾರ 5 ರೂ. ಹೆಚ್ಚಳವಾಗಿತ್ತು, ಗುರುವಾರ 10ರಿಂದ 15 ರೂ.ನಷ್ಟು ಮತ್ತೆ ಏರಿಕೆಯಾಗಿದೆ. ಟೊಮೆಟೋಗೆ 25ರಿಂದ 30ಕ್ಕೆ, ಬೀಟ್‌ರೋಟ್, ಕ್ಯಾಬೇಜ್, ಸೋರೆಕಾಯಿ 30ರಿಂದ 35ಕ್ಕೆ, ಆಲೂಗಡ್ಡೆ 40ರಿಂದ 45ಕ್ಕೆ, ತೊಂಡೆಕಾಯಿ 45ರಿಂದ 50ಕ್ಕೆ, ಕ್ಯಾರೆಟ್ 60ರಿಂದ 70ಕ್ಕೆ, ಹೀರೆಕಾಯಿ 55ರಿಂದ 60ಕ್ಕೆ, ಕಾಯಿ ಮೆಣಸು 70ರಿಂದ 85ಕ್ಕೆ, ಸೌತೆ 20ರಿಂದ 25ಕ್ಕೆ, ಅಲಸಂಡೆ 50ರಿಂದ 65ಕ್ಕೆ, ಕಿತ್ತಳೆ 100ರಿಂದ 120ಕ್ಕೆ, ಮಾವು 80ರಿಂದ 130ಕ್ಕೆ, ನೇಂದ್ರ ಬಾಳೆ ಹಣ್ಣು 50ರಿಂದ 60 ರೂಪಾಯಿಗೆ ದರ ಏರಿಸಿ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.