

ಹೊಸದುರ್ಗ: ಮಧ್ಯ ಕರ್ನಾಟಕದ ಜಲಪಾತ್ರೆ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬಾಗಿನ ಸಮರ್ಪಿಸುತ್ತಿರುವುದಕ್ಕೆ ಅಭಿನಂದಿಸುವೆ. ತಾಲೂಕಿನ ಕೃಷಿಕರ ಪರವಾದ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸಿಎಂ ಮುಂದಾಗಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಒತ್ತಾಯಿಸಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಬುಧವಾರ ವಾಣಿವಿಲಾಸ ಸಾಗರ ಹಿನ್ನೀರಿನ ಸಂಕಷ್ಟ ಹಾಗೂ ನೀರು ಬಳಕೆ ಕುರಿತು ಸಭೆ ನಡೆಸಿ ಮಾತನಾಡಿದರು.
ಜಲಾಶಯ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ತಾಲೂಕಿನ ಜನರಿಗೆ ನೀರು ಹಂಚಿಕೆಯಾಗಿಲ್ಲ. ಸರ್ಕಾರ ಕೂಡಲೇ ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯ 29 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ನೀರಿನ ಹಂಚಿಕೆ ಮಾಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. 2025ರ ಬಜೆಟ್‌ನಲ್ಲಿ ನೀರಾವರಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.
ವಿ.ವಿ.ಸಾಗರದ ಗರಿಷ್ಠ ನೀರಿನ ಮಟ್ಟ 130 ಆಡಿ ನಂತರ ಹೆಚ್ಚುವರಿ ನೀರನ್ನು ಹೊರಗೆ ಬಿಡಲು ಹಾಗೂ ಪ್ರವಾಹ ನಿಯಂತ್ರಿಸಲು ಕೋಡಿಗೆ ಕಬ್ಬಿಣದ ಗೇಟುಗಳನ್ನು ಆಳವಡಿಸಬೇಕು. 130 ಆಡಿ ನೀರು ನಿಲ್ಲುವ ಹಿನ್ನೀರು ಪ್ರದೇಶದ ಗಡಿ ಗುರುತಿಸಬೇಕು. ದಾಖಲೆ ಹೊಂದಿರುವ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ
ತಾಲೂಕಿನ ಹಿನ್ನೀರಿನ ಜನರು ಸಂಕಷ್ಟದಲ್ಲಿರುವಾಗ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.